ಒಡಿಶಾ: ಮನೆಗೆ ನುಗ್ಗಿ ಇಬ್ಬರು ಬಾಲಕಿಯರನ್ನು ತುಳಿದು ಕೊಂದ ಕಾಡಾನೆ
ಭುವನೇಶ್ವರ: ಒಡಿಶಾದ ಸುಂದರಗಢ ಜಿಲ್ಲೆಯ ಕಾಂತಪಲ್ಲಿ ಗ್ರಾಮದಲ್ಲಿ ಕಾಡಾನೆಯೊಂದು ಮನೆ ನುಗ್ಗಿ ಇಬ್ಬರು ಹೆಣ್ಣು ಮಕ್ಕಳನ್ನು ತುಳಿದು ಕೊಂದ ಘಟನೆ ರವಿವಾರ ಮುಂಜಾನೆ ನಡೆದಿದೆ. ಆನೆಯ ದಾಳಿಗೆ ಬಲಿಯಾದ ಹೆಣ್ಣು ಮಕ್ಕಳು 12 ಹಾಗೂ 3 ವರ್ಷದವರೆಂದು ತಿಳಿದುಬಂದಿದೆ.
ರವಿವಾರ ನಸುಕಿನಲ್ಲಿ ಕಾಂತದಿಲ್ಲಿ ಗ್ರಾಮದ ಮುಂಡಾಸಾಹಿ ಪ್ರದೇಶದ ಮನೆಯೊಂದರ ಅವರಣಕ್ಕೆ ಒಂಟಿ ಸಲಗವೊಂದು ನುಗ್ಗಿತ್ತು. ಆನೆಯನ್ನು ಕಂಡು ಮನೆಯಲ್ಲಿದ್ದವರು ಗಾಬರಿಯಿಂದ ಓಡಿದರು. ಆದರೆ ಈ ಗದ್ದಲದ ನಡುವೆ ನಿದ್ರೆಯಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳು ಅಲ್ಲೇ ಉಳಿದಿದ್ದರು.
ಗದ್ದಲವನ್ನು ಕೇಳಿ ಎಚ್ಚರಗೊಂಡ 12 ವರ್ಷದ ಬಾಲಕಿ ಓಡಿಹೋಗಲು ಯತ್ನಿಸಿದಳು.ಆದರೆ ಆಕೆ ಪರಾರಿಯಾಗುವ ಮುನ್ನವೇ ಸಲಗವು ಆಕೆಯನ್ನು ಸೊಂಡಿಲಿನಿಂದ ಹಿಡಿದು ತುಳಿದು ಕೊಂದಿದೆ. ಆನಂತರ 3 ವರ್ಷದ ಬಾಲಕಿ ಕೂಡಾ ಆನೆಯ ಕಾಲ್ತುಳಿತಕ್ಕೆ ಬಲಿಯಾದಳು. ಒಂಟಿ ಸಲಗದ ದಾಳಿಯಲ್ಲಿ ಇನ್ನು ಕೆಲವು ವ್ಯಕ್ತಿಗಳು ಗಾಯಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಈ ಘಟನೆ ನಡೆಯುವ ಮುನ್ನ ಆನೆಗಳ ಹಿಂಡೊಂದು ಆ ಪ್ರದೇಶದಲ್ಲಿ ಅಲೆದಾಡುತ್ತಿರುವುದು ಕಂಡುಬಂದಿತ್ತು. ಘಟನೆಯ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿದೆ. ಆದಾಗ್ಯೂ ಪೊಲೀಸರಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಈ ವಿಷಯವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಕಾಡಾನೆಗ ಉಪಟಳದಿಂದ ತಮ್ಮ ಬದುಕು ದುಸ್ತರಗೊಂಡಿದ್ದರೂ, ಅರಣ್ಯಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.