ಸತ್ಯ ಹೇಳಿದವರಿಗೆ ವಾಗ್ದಂಡನೆಯ ಬೆದರಿಕೆ: ಇಂಡಿಯಾ ಮೈತ್ರಿಕೂಟ ವಿರುದ್ಧ ಆದಿತ್ಯನಾಥ್ ವಾಗ್ದಾಳಿ

Update: 2024-12-15 16:54 GMT

ಆದಿತ್ಯನಾಥ್ | PC : PTI

ಲಕ್ನೋ: ಭಾರತದಲ್ಲಿ “ಯಾರೇ ಸತ್ಯ ಹೇಳಿದರೂ ಅವರಿಗೆ ವಾಗ್ದಂಡನೆಯ ಬೆದರಿಕೆ ಒಡ್ಡಲಾಗುತ್ತದೆ’’ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಶನಿವಾರ ಹೇಳಿದ್ದಾರೆ.

ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ವಿರುದ್ಧ ಇಂಡಿಯಾ ಮೈತ್ರಿಕೂಟ ತಂದಿರುವ ವಾಗ್ದಂಡನೆ ನಿರ್ಣಯ ಮತ್ತು ಅಲಹಾಬಾದ್ ಹೈಕೋರ್ಟ್‍ನ ನ್ಯಾಯಾಧೀಶ ಶೇಖರ್ ಯಾದವ್ ವಿರುದ್ಧ ರಾಜ್ಯಸಭಾ ಸದಸ್ಯರ ಗುಂಪೊಂದು ತಂದಿರುವ ವಾಗ್ದಂಡನೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

“ಯಾರೇ ಸತ್ಯ ಹೇಳಿದರೂ, ಈ ಜನರು ವಾಗ್ದಂಡನೆ ಮೂಲಕ ಅವರ ಮೇಲೆ ಒತ್ತಡ ಹೇರುತ್ತಾರೆ. ಮತ್ತೆ ಅವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಅವರ ದ್ವಂದ್ವ ನೀತಿಯನ್ನು ನೋಡಿ. ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಬೇಕು ಮತ್ತು ಜಗತ್ತಿನಾದ್ಯಂತ ಬಹುಸಂಖ್ಯಾತ ಸಮುದಾಯದ ಭಾವನೆಗಳನ್ನು ಗೌರವಿಸಲಾಗುತ್ತದೆ ಎಂದು ಅಲಹಾಬಾದ್ ಹೈಕೋರ್ಟ್‍ನ ನ್ಯಾಯಾಧೀಶರೊಬ್ಬರು ಹೇಳಿದರು. ಯಾರಾದರೂ ಈ ಮಾತುಗಳನ್ನು ಹೇಳಿದರೆ ಅದರಲ್ಲಿ ತಪ್ಪೇನಿದೆ? ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಬೇಡವೇ?’’ ಎಂದು ಆದಿತ್ಯನಾಥ್ ಪ್ರಶ್ನಿಸಿದರು.

ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಢ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‍ಡಿಎ)ಗೆ ಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಸಭಾಪತಿ ಜಗದೀಪ್ ಧನ್ಕರ್ ವಿರುದ್ಧ ಪ್ರತಿಪಕ್ಷಗಳು ತಂದಿರುವ ವಾಗ್ದಂಡನೆ ನಿರ್ಣಯದ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ ಆದಿತ್ಯನಾಥ್, ಧನ್ಕರ್ ರೈತನ ಮಗ ಎಂದು ಹೇಳಿದರು.

“ಉಪರಾಷ್ಟ್ರಪತಿಯು ಮೇಲ್ಮನೆಯ ಉಸ್ತುವಾರಿಯಾಗಿ ತನ್ನ ಕರ್ತವ್ಯವನ್ನು ಮಾಡುತ್ತಿದ್ದಾರೆ. ರೈತನ ಮಗನೊಬ್ಬ ಈ ಸ್ಥಾನಕ್ಕೆ ಏರಿರುವುದು ಪ್ರತಿಪಕ್ಷಗಳನ್ನು ಚಿಂತೆಗೀಡು ಮಾಡಿದೆ. ಒಬ್ಬರು ನ್ಯಾಯಾಧೀಶರಾಗಿ ಹಾಗೂ ಈ ದೇಶದ ನಾಗರಿಕರಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸತ್ಯ ಹೇಳಿದರೆ ಅವರನ್ನು ವಾಗ್ದಂಡನೆಯ ಮೂಲಕ ಬೆದರಿಸಲಾಗುತ್ತಿದೆ’’ ಎಂದು ಅವರು ನುಡಿದರು.

ಕಾಂಗ್ರೆಸ್ ಸಂವಿಧಾನದ “ಕತ್ತು ಹಿಸುಕುತ್ತಿದೆ’’ ಎಂದು ಆರೋಪಿಸಿದ ಅವರು, ಇದು ಆ ಹಳೆಯ ಪಕ್ಷದ “ಹಳೆಯ ಅಭ್ಯಾಸ’’ ಎಂಬುದಾಗಿ ಬಣ್ಣಿಸಿದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News