ಶತಕ ಬಾರಿಸಿದ ಅನುರಾಗ್ ಸಿಂಗ್ ಠಾಕೂರ್; ರಾಜ್ಯಸಭೆ ವಿರುದ್ಧ ಲೋಕಸಭೆ ಗೆಲುವು
ಹೊಸದಿಲ್ಲಿ: ರವಿವಾರ ಲೋಕಸಭೆ ಮತ್ತು ರಾಜ್ಯಸಭೆ ನಡುವಿನ ಕದನ ಕುತೂಹಲ ವೀಕ್ಷಿಸಲು ಅಭಿಮಾನಿಗಳು ಸಾಲುಗಟ್ಟಿದ್ದರು. ಆದರೆ ಸದನ ಒಳಗೆ ಅಲ್ಲ; ಸದನದ ಹೊರಗಿನ ಕ್ರಿಕೆಟ್ ಮೈದಾನದಲ್ಲಿ. ಮೇಜರ್ ಧ್ಯಾನ್‍ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ಕ್ಷಯ ವಿರುದ್ಧ ಜಾಗೃತಿಗೆ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯ ಅಭಿಮಾನಿಗಳಿಗೆ ವಿಶೇಷ ಅನುಭವ ನೀಡಿತು.
ಮಾಜಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ನೇತೃತ್ವದ ಲೋಕಸಭೆ ಅಧ್ಯಕ್ಷರ ತಂಡ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ನೇತೃತ್ವದ ರಾಜ್ಯಸಭಾಧ್ಯಕ್ಷರ ತಂಡದ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲೋಕಸಭಾಧ್ಯಕ್ಷರ ತಂಡ 73 ರನ್‍ಗಳ ಭರ್ಜರಿ ಜಯ ದಾಖಲಿಸಿತು.
'ಕ್ಷಯಮುಕ್ತ ಭಾರತ ಕ್ರಿಕೆಟ್ ಪಂದ್ಯ' ಹೆಸರಿನ ಪಂದ್ಯವನ್ನು ಪಕ್ಷಬೇಧ ಮರೆತು ಎಲ್ಲ ಸಂಸದರು ಸಂಭ್ರಮಿಸಿದರು. ಲೋಕಸಭಾಧ್ಯಕ್ಷರ ತಂಡದ ಪರವಾಗಿ ಕ್ರೀಡಾ ಖಾತೆ ಮಾಜಿ ರಾಜ್ಯ ಸಚಿವ ಠಾಕೂರ್ 111 ರನ್‍ಗಳನ್ನು ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅತ್ಯುತ್ತಮ ಫೀಲ್ಡರ್ ಎನಿಸಿದರೆ, ಕಾಂಗ್ರೆಸ್ ಸಂಸದ ದೀಪೇಂದ್ರ ಸಿಂಗ್ ಹೂಡಾ ಉತ್ತಮ ಬೌಲರ್ ಆಗಿ ಹೊರಹೊಮ್ಮಿದರು.
ಈಶಾನ್ಯ ದಿಲ್ಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಸೂಪರ್ ಕ್ಯಾಚ್ ಪ್ರಶಸ್ತಿ ಪಡೆದರು. ಎಲ್ಲ ವಿಶೇಷ ಬಹುಮಾನಗಳನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿತರಿಸಿದರು. ಲೋಕಸಭೆ ಸ್ಪೀಕರ್ ಓಂಬಿರ್ಲಾ ಕೂಡಾ ಬ್ಯಾಟ್ ಹಿಡಿದು ಮೈದಾನದಲ್ಲಿ ಗಮನ ಸೆಳೆದರು.