2025ರಿಂದ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣಕ್ಕೆ ರಷ್ಯಾ ಅನುಮತಿ ಸಾಧ್ಯತೆ

Update: 2024-12-16 07:21 GMT
Photo credit: PTI

ಹೊಸದಿಲ್ಲಿ: 2025ರಿಂದ ಭಾರತೀಯರಿಗೆ ವೀಸಾ-ಮುಕ್ತವಾಗಿ (ವೀಸಾ-ಇಲ್ಲದೆಯೇ) ಪ್ರಯಾಣಕ್ಕೆ ರಷ್ಯಾ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಜೂನ್ ನಲ್ಲಿ, ರಷ್ಯಾ ಮತ್ತು ಭಾರತ ಪರಸ್ಪರ ವೀಸಾ ನಿರ್ಬಂಧಗಳನ್ನು ಸರಳಗೊಳಿಸುವ ದ್ವಿಪಕ್ಷೀಯ ಒಪ್ಪಂದವನ್ನು ಚರ್ಚಿಸಿದೆ ಎಂದು ವರದಿಯಾಗಿತ್ತು. ವೀಸಾ-ಮುಕ್ತ ಪ್ರಯಾಣ ಅವಕಾಶವು ಪ್ರವಾಸೋದ್ಯಮ, ಸಾಂಸ್ಕೃತಿಕ ವಿನಿಮಯ ಮತ್ತು ಎರಡು ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

2023ರ ಆಗಸ್ಟ್ ನಿಂದ ಇ-ವೀಸಾ ಮೂಲಕ ರಷ್ಯಾಕ್ಕೆ ಪ್ರಯಾಣಿಸಲು ಭಾರತೀಯರು ಅರ್ಹರಾಗಿದ್ದಾರೆ. ಭಾರತೀಯ ಪ್ರಯಾಣಿಕರಿಗೆ 9,500 ಇ-ವೀಸಾಗಳನ್ನು ಕಳೆದ ವರ್ಷ ನೀಡಲಾಗಿದೆ. ಈ ಮೂಲಕ ರಷ್ಯಾದ ಇ-ವೀಸಾಗಳನ್ನು ಪಡೆದ ಅಗ್ರ ಐದು ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ ಎಂದು The Indian Express ವರದಿ ಮಾಡಿದೆ.

ಭಾರತೀಯ ಪ್ರಜೆಗಳು ಪ್ರಸ್ತುತ ರಷ್ಯಾಕ್ಕೆ ಪ್ರಯಾಣ ಬೆಳೆಸಲು, ರಷ್ಯಾದಲ್ಲಿ ಉಳಿಯಲು ಮತ್ತು ನಿರ್ಗಮಿಸಲು ರಷ್ಯಾದ ರಾಯಭಾರ ಕಚೇರಿ ನೀಡುವ ವೀಸಾವನ್ನು ಹೊಂದಿರಬೇಕು. ಹೆಚ್ಚಾಗಿ ಭಾರತೀಯರು ವ್ಯಾಪಾರ ಅಥವಾ ಅಧಿಕೃತ ಉದ್ದೇಶಗಳಿಗಾಗಿ ರಷ್ಯಾಕ್ಕೆ ಪ್ರಯಾಣಿಸುತ್ತಾರೆ. 2023ರಲ್ಲಿ 60,000ಕ್ಕೂ ಹೆಚ್ಚು ಭಾರತೀಯರು ಮಾಸ್ಕೋಗೆ ಪ್ರಯಾಣಿಸಿದ್ದಾರೆ. ಇದು 2022ಕ್ಕಿಂತ 26 ಶೇಕಡಾ ಹೆಚ್ಚಳವಾಗಿದೆ.

ಪ್ರಸ್ತುತ, ಭಾರತವು 62 ದೇಶಗಳಿಗೆ ವೀಸಾ ಮುಕ್ತ ಪ್ರಯಾಣದ ಅವಕಾಶವನ್ನು ಹೊಂದಿದೆ. ಭಾರತೀಯ ಪಾಸ್‌ ಪೋರ್ಟ್ ಹೊಂದಿರುವವರು ಇಂಡೋನೇಷ್ಯಾ, ಮಾಲ್ಡೀವ್ಸ್ ಮತ್ತು ಥೈಲ್ಯಾಂ‌ಡ್‌ ನಂತಹ ಜನಪ್ರಿಯ ಪ್ರವಾಸಿ ತಾಣಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News