ಕುರುಕ್ಷೇತ್ರದ ಗೀತಾ ಜಯಂತಿ ವೇಳೆ ಸಂಘ ಪರಿವಾರ ಕಾರ್ಯಕರ್ತರಿಂದ ಮುಸ್ಲಿಂ ವ್ಯಾಪಾರಿಗಳ ಮೇಲೆ ದಾಳಿ; ವಕೀಲರು, ಸಾಮಾಜಿಕ ಕಾರ್ಯಕರ್ತರಿಂದ ಖಂಡನೆ
ಹರ್ಯಾಣ: ಕುರುಕ್ಷೇತ್ರದ ಗೀತಾ ಜಯಂತಿ ಜಾತ್ರೆಯ ವೇಳೆ ಸಂಘ ಪರಿವಾರ ಕಾರ್ಯಕರ್ತರಿಂದ ಮುಸ್ಲಿಂ ವ್ಯಾಪಾರಿಗಳ ಮೇಲೆ ನಿರಂತರ ದಾಳಿ ನಡೆದಿದ್ದು, ಈ ಬೆಳವಣಿಗೆ ಖಂಡನಿಯ ಎಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ.
ಒಂದು ಕಾಲದಲ್ಲಿ ಕರಕುಶಲತೆಯಲ್ಲಿ ಆಸಕ್ತಿ ಹೊಂದಿದ್ದವರಿಗೆ ವೇದಿಕೆಯಾಗಿದ್ದ ಮೇಳದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಕವಿತಾ ವಿದ್ರೋಹಿ ಸೇರಿದಂತೆ ಖ್ಯಾತ ವಕೀಲರು, ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾತ್ರೆಯನ್ನು ಪ್ರಚಾರ ಮಾಡುತ್ತಿದೆ, ಆದ್ರೆ, ಹಿಂದುತ್ವವಾದಿಗಳು ದ್ವೇಷವನ್ನು ಹರಡುವಾಗ ಕಣ್ಣು ಮುಚ್ಚಿಕೊಂಡಿದೆ ಎಂದು ಹೇಳಿದ್ದಾರೆ.
PC : hindi.newsclick.in
ಸಂಘ ಪರಿವಾರದ ಕಾರ್ಯಕರ್ತರು ಮುಸ್ಲಿಂ ಅಂಗಡಿಯವರನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕುರುಕ್ಷೇತ್ರದ ಬ್ರಹ್ಮಸರೋವರದಲ್ಲಿ ಕರಕುಶಲ ಉತ್ಸವವಾಗಿ ಪ್ರಾರಂಭವಾದ ಮೇಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವದ ಗುಂಪುಗಳ ಪ್ರಾಬಲ್ಯ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 6 ಮತ್ತು 7ರಂದು ಕೋಮು ಹಿಂಸಾಚಾರದ ಘಟನೆಗಳು ನಡೆದಿವೆ. ಹಿಂದುತ್ವವಾದಿಗಳು ಮುಸ್ಲಿಂ ವ್ಯಾಪಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಮತ್ತು ಅವರ ಮೇಲೆ ದಾಳಿ ನಡೆಸಿದ್ದಾರೆ. ಡಿಸೆಂಬರ್ 6 ರಂದು 20ರಿಂದ 25 ಜನರ ಗುಂಪು ಕಲುಷಿತ ಆಹಾರವನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ನೆಪದಲ್ಲಿ ಮುಸ್ಲಿಂ ವ್ಯಾಪಾರಿಯೋರ್ವ ನಡೆಸುತ್ತಿದ್ದ ಭೇಲ್ ಪುರಿ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ಮುಸ್ಲಿಂ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆದಿದೆ. ವ್ಯಾಪರಿ ಹೆದರಿ ಅಂಗಡಿಯನ್ನು ಬಂದ್ ಮಾಡಿದ್ದಾನೆ. ಅದೇ ದಿನ ಪೀಠೋಪಕರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕನಿಗೆ ಗುಂಪು ಕಿರುಕುಳ ನೀಡಿದೆ ಎಂದು ಹೇಳಿದ್ದಾರೆ.
PC : hindi.newsclick.in
ಡಿಸೆಂಬರ್ 7ರಂದು ಬಟ್ಟೆಗಳನ್ನು ಮಾರುತ್ತಿದ್ದ ಕಾಶ್ಮೀರಿ ಮುಸ್ಲಿಂ ವ್ಯಾಪಾರಿ ಮೇಲೆ ಗುಂಪೊಂದು ದಾಳಿ ನಡೆಸಿದೆ. ಅವರು ವ್ಯಾಪಾರಿಯನ್ನು ಬಾಂಗ್ಲಾ ದೇಶಿಗ ಎಂದು ಕರೆದು ಆತನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕೋಮು ಘೋಷಣೆಗಳನ್ನು ಕೂಗಿದ್ದಾರೆ, ದಾಳಿಕೋರರು ವ್ಯಾಪಾರಿಯ ಫೋನ್ ಎಸೆದು ಹಾನಿಗೊಳಿಸಿದ್ದಾರೆ. ಅವರ ಸರಕುಗಳನ್ನು ಅಂಗಡಿಯಿಂದ ಹೊರಗೆ ಎಸೆದಿದ್ದಾರೆ. ಆದರೆ ಪೊಲೀಸರು ಅಲ್ಲಿದ್ದರೂ, ಈ ವೇಳೆ ಮಧ್ಯಪ್ರವೇಶಿಸಿ ದುಷ್ಕೃತ್ಯವನ್ನು ತಡೆಯಲಿಲ್ಲ. ವರ್ಷಗಳಿಂದ ಮೇಳದಲ್ಲಿ ಭಾಗವಹಿಸುತ್ತಿರುವ ಸ್ಥಳೀಯ ವ್ಯಾಪಾರಿಗಳು ಹಿಂದುತ್ವವಾದಿಗಳ ದುಷ್ಕೃತ್ಯದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ, ಆದರೆ ಇದುವರೆಗೆ ಯಾವುದೇ ಮಹತ್ವದ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.