ಚುನಾವಣಾ ಬಾಂಡ್ ಹಣ ಮುಟ್ಟುಗೋಲು ಮನವಿ ತಿರಸ್ಕರಿಸಿದ್ದ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂ ನಕಾರ

ಸುಪ್ರೀಂ | PC : PTI
ಹೊಸದಿಲ್ಲಿ: 2018ರ ಚುನಾವಣಾ ಬಾಂಡ್ ಯೋಜನೆಯಡಿ ರಾಜಕೀಯ ಪಕ್ಷಗಳು ಸ್ವೀಕರಿಸಿದ್ದ 16,518 ಕೋಟಿ ರೂ.ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿರುದ್ಧ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.
ಯೋಜನೆಯಡಿ ಸ್ವೀಕರಿಸಲಾಗಿದ್ದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರಿದ್ದ ಅರ್ಜಿಗಳನ್ನು ತಿರಸ್ಕರಿಸಿದ್ದ ಆ.2, 2024ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಖೇಮ್‌ಸಿಂಗ್ ಭಾಟಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ ಮಿಶ್ರಾ ಅವರ ಪೀಠವು ವಜಾಗೊಳಿಸಿತು.
ಇತ್ತೀಚಿಗೆ ಸಾರ್ವಜನಿಕಗೊಳಿಸಲಾಗಿರುವ ಸರ್ವೋಚ್ಚ ನ್ಯಾಯಾಲಯದ ಮಾ.26ರ ಆದೇಶವು,ಈ ವಿಷಯದಲ್ಲಿ ಮುಕ್ತ ನ್ಯಾಯಾಲಯ ವಿಚಾರಣೆ ನಡೆಸಬೇಕೆಂಬ ಭಾಟಿಯವರ ಕೋರಿಕೆಯನ್ನು ಸ್ವೀಕರಿಸಲೂ ನಿರಾಕರಿಸಿದೆ.
ಕಳೆದ ವರ್ಷದ ಫೆ.15ರಂದು ಆಗಿನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಬಿಜೆಪಿ ಸರಕಾರವು ಜಾರಿಗೊಳಿಸಿದ್ದ ಅನಾಮಧೇಯ ರಾಜಕೀಯ ದೇಣಿಗೆಗಳ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿತ್ತು.