ಖ್ಯಾತ ಸಂಗೀತಗಾರ ಇಳಯರಾಜ ಅವರಿಗೆ ಗರ್ಭಗುಡಿ ಪ್ರವೇಶ ನಿರ್ಬಂಧಿಸಿದ ದೇವಾಲಯದ ಸಿಬ್ಬಂದಿ: ಆರೋಪ

Update: 2024-12-16 09:44 GMT

Screengrab:X

ಚೆನ್ನೈ: ಖ್ಯಾತ ಸಂಗೀತಗಾರ ಇಳಯರಾಜ ಅವರಿಗೆ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಲು ಅವಕಾಶ ನಿರಾಕರಿಸಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶ್ರೀವಿಲ್ಲಿಪುತೂರ್ ಆಂಡಾಳ್ ದೇವಾಲಯದಲ್ಲಿ ನಡೆದ ದಿವ್ಯ ಪಾಶುರಂ ಕಾರ್ಯಕ್ರಮದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪ್ರಸಿದ್ಧ ಸಂಗೀತಗಾರ ಇಳಯರಾಜ ಅವರನ್ನು ಅರ್ಧ ಮಂಟಪ (ಗರ್ಭಗುಡಿ)ದಿಂದ ಹೊರಹೋಗುವಂತೆ ದೇವಾಲಯದ ಅರ್ಚಕರು ಹಾಗೂ ಆಡಳಿತ ಮಂಡಳಿಯವರು ಕೇಳಿದ್ದಾರೆ ಎಂದು ವರದಿಯಾಗಿದೆ.

ಅರ್ಚಕರು ಮತ್ತು ಆಡಳಿತ ಮಂಡಳಿಯವರು ಇಳಯರಾಜ ಅವರಿಗೆ ಶ್ರೀವಿಲ್ಲಿಪುತೂರ್ ಆಂಡಾಳ್ ದೇವಾಲಯದ ಸ್ವಾಗತ ಸಮಾರಂಭದಲ್ಲಿ ಉಲ್ಲಂಘನೆಗಳಾಗಿವೆ ಎಂದು ತಿಳಿಸಿ, ಗರ್ಭಗುಡಿಯಿಂದ ಹೊರಹೋಗುವಂತೆ ಕೇಳಿಕೊಂಡಿದ್ದು, ಬಳಿಕ ಇಳಯರಾಜ ದೇವಾಲಯದಿಂದ ಹೊರಬಂದು ಪ್ರಾರ್ಥನೆ ಸಲ್ಲಿಸಿದರು ಎಂದು ವರದಿಯಾಗಿದೆ.

ದೇವಾಲಯದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಳಯರಾಜ ಆಗಮಿಸಿದ್ದರು, ಈ ವೇಳೆ ದೇವಾಲಯದ ಆನೆಯೊಂದು ಅವರನ್ನು ಸಹ ಸ್ವಾಗತಿಸಿತ್ತು.‌ ನಂತರ ಇಳಯರಾಜ ಗರ್ಭಗುಡಿ ಪ್ರವೇಶಿಸಿದಾಗ, ದೇವಾಲಯದ ಅಧಿಕಾರಿಗಳು ಅವರನ್ನು ಹೊರಗೆ ಹೋಗುವಂತೆ ಕೇಳಿಕೊಂಡಿದ್ದಾರೆ.

ಇದು ವಿವಾದಕ್ಕೆ ಕಾರಣವಾಗಿದ್ದು, ಇಳಯರಾಜ ಅವರ ದಲಿತ ಹಿನ್ನೆಲೆಯಿಂದಾಗಿ ಗರ್ಭಗುಡಿ ಪ್ರವೇಶ ನಿರಾಕರಿಸಲಾಗಿದೆ ಎಂದು ಹಲವು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಕ್ರೋಶ ಹೊರ ಹಾಕಿದ್ದಾರೆ.

ವಿವಾದದ ಬಳಿಕ, ಶ್ರೀವಿಲ್ಲಿಪುತೂರು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದ್ದು, ಗರ್ಭಗುಡಿಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ, ಯಾವುದೇ ಭಕ್ತರಿಗೂ ಆ ಜಾಗಕ್ಕೆ ಪ್ರವೇಶವಿಲ್ಲ. ಇಳಯರಾಜ ಅವರು ನಿರ್ಬಂಧಿತ ಪ್ರದೇಶಕ್ಕೆ ತಪ್ಪಾಗಿ ಪ್ರವೇಶಿಸಿದ್ದಾರೆ, ಈ ಬಗ್ಗೆ ಅವರ ಗಮನಕ್ಕೆ ತಂದಾಗ, ಸ್ವತಃ ಅವರೇ ಅಲ್ಲಿಂದ ಹೊರಟುಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News