ಛತ್ತೀಸ್‌ಗಢ | ಕಾರು-ಟ್ರಕ್ ನಡುವೆ ಢಿಕ್ಕಿ: 6 ಮಂದಿ ಮೃತ್ಯು, 7 ಮಂದಿಗೆ ಗಾಯ
ಬಲೋಡ್: ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಮೃತಪಟ್ಟು, ಏಳು ಮಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಬಲೋಡ್ ಜಿಲ್ಲೆಯಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಈ ಅಫಘಾತವು ರವಿವಾರ ತಡ ರಾತ್ರಿ ದೌಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಬಲೋಡ್ ಜಿಲ್ಲೆಯ ಗುಂದೇರ್‌ದೇಹಿ ಪ್ರದೇಶದ ನಿವಾಸಿಗಳಾದ ಸಂತ್ರಸ್ತರು ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೃತರನ್ನು ದುರ್ಪತ್ ಪ್ರಜಾಪತಿ (30), ಸುಮಿತ್ರಾ ಬಾಯಿ ಕುಂಭ್‌ಕರ್ (50), ಮನೀಶಾ ಕುಂಭ್‌ಕರ್ (35), ಸಗುನ್ ಬಾಯಿ ಕುಂಭ್‌ಕರ್ (50), ಇಮ್ಲಾ ಬಾಯಿ (55) ಹಾಗೂ ಬಾಲಕ ಜಿಗ್ನೇಶ್ ಕುಂಭ್‌ಕರ್ (7) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಐವರು ಮಹಿಳೆಯರು ಹಾಗೂ ಓರ್ವ ಮಗು ಸೇರಿದಂತೆ ಗಾಯಗೊಂಡಿರುವ ಏಳು ಮಂದಿಯನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು. ನಂತರ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಜನಂದಗಾಂವ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.