ಫೆಲೆಸ್ತೀನ್ ಸಂಕೇತಗಳ ಚೀಲದೊಂದಿಗೆ ಸಂಸತ್ತಿಗೆ ಬಂದ ಪ್ರಿಯಾಂಕಾ ಗಾಂಧಿ

Update: 2024-12-16 10:56 GMT

ಪ್ರಿಯಾಂಕಾ ಗಾಂಧಿ | PTI 

ಹೊಸದಿಲ್ಲಿ: ವಯನಾಡ್‌ ಸಂಸದೆ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ‌ʼಫೆಲೆಸ್ತೀನ್ʼ ಎಂದು ಬರೆದ ಚೀಲವನ್ನು ಹಾಕಿಕೊಂಡು ಸಂಸತ್ತಿಗೆ ತೆರಳಿದ್ದು, ಆ ಮೂಲಕ ಫೆಲೆಸ್ತೀನ್‌ ಜನರಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ಪ್ರಿಯಾಂಕ ಅವರ ಚೀಲವು, "ಫೆಲೆಸ್ತೀನ್" ಎಂಬ ಪದ ಮತ್ತು ಕಲ್ಲಂಗಡಿ ಸೇರಿದಂತೆ ಫೆಲೆಸ್ತೀನ್ ಲಾಂಛನಗಳನ್ನು ಹೊಂದಿದ್ದು, ಬಲಪಂಥೀಯರ ಕೆಂಗಣ್ಣಿಗೂ ಗುರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯು, ʼಇದು ಮುಸ್ಲಿಮರನ್ನು ಮೆಚ್ಚಿಸುವ ಕ್ರಮʼ ಎಂದು ಪ್ರಿಯಾಂಕಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಿಯಾಂಕಾ ವಾದ್ರಾ ತಮ್ಮ ಚೀಲವನ್ನು ತೋರಿಸುತ್ತಿರುವ ಚಿತ್ರವನ್ನು ಹಂಚಿಕೊಂಡ ಕಾಂಗ್ರೆಸ್ ವಕ್ತಾರೆ ಡಾ. ಶಮಾ ಮಹಮ್ಮದ್ ಅವರು, ”ಪ್ರಿಯಾಂಕಾ ಗಾಂಧಿ ಅವರು ತಮ್ಮ ಬೆಂಬಲವನ್ನು ಸಂಕೇತಿಸುವ ವಿಶೇಷ ಚೀಲವನ್ನು ಹೊತ್ತುಕೊಂಡು ಫೆಲೆಸ್ತೀನ್ ಜೊತೆ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಇದು ಕರುಣೆ, ನ್ಯಾಯ ಮತ್ತು ಮಾನವೀಯತೆಯ ಬದ್ಧತೆಯ ಸೂಚಕ! ಜಿನೀವಾ ಸಮಾವೇಶವನ್ನು ಯಾರೂ ಉಲ್ಲಂಘಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿದೆ" ಎಂದು ಬರೆದಿದ್ದಾರೆ.

ಗಾಝಾದ ಮೇಲಿನ ಇಸ್ರೇಲ್‌ನ ದಮನಕಾರಿ ಆಕ್ರಮಣದ ವಿರುದ್ಧ ಧ್ವನಿ ಎತ್ತುತ್ತಾ ಬಂದಿರುವ ಪ್ರಿಯಾಂಕಾ ಗಾಂಧಿ ಅವರು, ಫೆಲೆಸ್ತೀನಿಯನ್ನರಿಗೆ ಈ ಹಿಂದೆಯೂ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಜೂನ್‌ನಲ್ಲಿ, ಪ್ರಿಯಾಂಕ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಟೀಕಿಸುತ್ತಾ, ಇಸ್ರೇಲ್ ಸರ್ಕಾರವು ಗಾಝಾದಲ್ಲಿ ನಡೆಸುತ್ತಿರುವುದು "ಜನಾಂಗೀಯ ಹತ್ಯೆ" ಎಂದು ಹೇಳಿದ್ದರು. ಅಲ್ಲದೆ, ಬೆಂಜಮಿನ್‌ ಸರ್ಕಾರವನ್ನು "ಅನಾಗರಿಕ" ಎಂದು ಕರೆದಿದ್ದರು.

ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ನೆತನ್ಯಾಹು ಸಮರ್ಥಿಸಿಕೊಂಡ ಬೆನ್ನಲ್ಲೇ, ಇಸ್ರೇಲ್‌ ನಡೆ ವಿರುದ್ಧ ಆಕ್ರೋಶ ಹೊರ ಹಾಕಿದ್ದ ಪ್ರಿಯಾಂಕಾ, " ಇಸ್ರೇಲ್ ಸರ್ಕಾರದ ನರಮೇಧ ಕ್ರಮಗಳನ್ನು ಖಂಡಿಸುವುದು ಮತ್ತು ಅವುಗಳನ್ನು ನಿಲ್ಲಿಸುವಂತೆ ಒತ್ತಾಯಿಸುವುದು, ದ್ವೇಷ ಮತ್ತು ಹಿಂಸೆಯಲ್ಲಿ ನಂಬಿಕೆಯಿಲ್ಲದ ಎಲ್ಲಾ ಇಸ್ರೇಲಿ ನಾಗರಿಕರು ಸೇರಿದಂತೆ ಪ್ರತಿಯೊಬ್ಬ ಸರಿಯಾದ ಚಿಂತನೆಯ ವ್ಯಕ್ತಿಯ ನೈತಿಕ ಜವಾಬ್ದಾರಿ" ಎಂದು X ನಲ್ಲಿ ಪೋಸ್ಟ್‌ ಹಾಕಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಮತ್ತು ಬಿಜೆಪಿ ವಕ್ತಾರ ಸಂಬಿತ್ ಪಾತ್ರ, "ಗಾಂಧಿ ಕುಟುಂಬದ ಸದಸ್ಯರ ವಿಷಯದಲ್ಲಿ ಇದು ಹೊಸದೇನಲ್ಲ. ನೆಹರೂ ಅವರಿಂದ ಹಿಡಿದು ಪ್ರಿಯಾಂಕಾ ವಾದ್ರಾವರೆಗೆ, ಗಾಂಧಿ ಕುಟುಂಬದ ಸದಸ್ಯರು ಓಲೈಕೆಯ ಚೀಲದೊಂದಿಗೆ ತಿರುಗಾಡುತ್ತಾರೆ. ಅವರು ಎಂದಿಗೂ ದೇಶಭಕ್ತಿಯ ಚೀಲವನ್ನು ಹೆಗಲ ಮೇಲೆ ಹೊತ್ತುಕೊಂಡಿಲ್ಲ. ಇದೇ ಅವರ ಸೋಲುಗಳಿಗೆ ಕಾರಣ," ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News