ಹಿಮಾಚಲ ಪ್ರದೇಶದ ಕೈಗಾರಿಕಾ ವಲಯದ ಅಂತರ್ಜಲದಲ್ಲಿ ಕ್ಯಾನ್ಸರ್‌ಕಾರಕ ಮಾಲಿನ್ಯಗಳ ಪತ್ತೆ
ಹೊಸದಿಲ್ಲಿ: ಹಿಮಾಚಲ ಪ್ರದೇಶದ ಬಾಡ್ಡಿ-ಬರೋಟಿವಾಲಾ (ಬಿಬಿ) ಕೈಗಾರಿಕಾ ಪ್ರದೇಶದ ಅಂತರ್ಜಲದಲ್ಲಿ ಕ್ಯಾನ್ಸರ್‌ಕಾರಕ ಮಾಲಿನ್ಯಗಳ ಇರುವಿಕೆಯನ್ನು ಮಾಂಡಿ ಐಐಟಿ ಹಾಗೂ ಜಮ್ಮು ಐಐಟಿಯ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಕೈಗಾರೀಕರಣದಿಂದಾಗಿ ಬಿಬಿ ಕೈಗಾರಿಕಾ ಪ್ರದೇಶದಲ್ಲಿ ಅಂತರ್ಜಲವು ವಿಷಕಾರಿ ಲೋಹ ಗಳಿಂದ ಮಾಲಿನ್ಯಗೊಂಡಿರುವುದನ್ನು ಅಧ್ಯಯನವನ್ನು ನಡೆಸಲಾಗಿತ್ತು. ಈ ಪ್ರದೇಶದ ಅಂತರ್ಜಲದ ಮಾದರಿಗಳನ್ನು ವಿಶ್ಲೇಷಿಸಿದಾಗ ಅವುಗಳಲ್ಲಿ ಕ್ಯಾನ್ಸರ್ಕಾರಕ ಮಾಲಿನ್ಯಗಳು ಪತ್ತೆಯಾಗಿದ್ದವು.
ಜಿಯೋಜೆನಿಕ್ ಯುರೇನಿಯಂ ಹಾಗೂ ಸತು, ಸೀಸ., ಕೊಬಾಲ್ಟ್, ನಿಕೆಲ್ ಹಾಗೂ ಕ್ರೋಮಿಯಂನಂತಹ ಕೈಗಾರಿಕಾ ಬಳಕೆಯ ಲೋಹಗಳಿಂದಾಗಿ ಇಲ್ಲಿನ ಅಂತರ್ಜಲದಲ್ಲಿ ಗಣನೀಯ ಮಾಲಿನ್ಯವಾಗಿದ್ದು, ಅನುಮತಿಸಲ್ಪಟ್ಟ ಮಿತಿಯನ್ನು ದಾಟಿದೆ ಎಂದರು.
ಸಂಸ್ಕರಿಸದ ಅಂತರ್ಜಲದ ಅವಲಂಬನೆಯಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ 2013 ಹಾಗೂ 2018ರ ನಡುವೆ ಕ್ಯಾನ್ಸರ್ ಹಾಗೂ ಮೂತ್ರಕೋಶದ ಕಾಯಿಲೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ವರದಿ ಬೆಟ್ಚು ಮಾಡಿದೆ.
ಈ ಪ್ರದೇಶದಲ್ಲಿ ಅಂತರ್ಜಲವು ಬಂಡೆಗಲ್ಲುಗಳ ನಡುವೆ ಇದ್ದು ಕ್ಯಾಲ್ಸಿಯಂ ಕಾರ್ಬೊನೆಟ್ ಅಂಶವನ್ನು ಹೊಂದಿದೆ. ಎಲ್ಲಾ ಮಾದರಿಗಳಲ್ಲಿಯೂ ಯುರೇನಿಯಂನ ಮಟ್ಟವು ಏಕರೂಪದಲ್ಲಿರುವುದು ಪತ್ತೆಯಾಗಿದೆ. ಕೈಗಾರಿಕಾ ಮೂಲಗಳಿಂದಲೋಹದ ಅಂಶಗಳು ಅಂತರ್ಜಲವನ್ನು ಸೇರಿರುವುದು ದೃಢಪಟ್ಟಿದೆ. ಆದರೆ ಯುರೇನಿಯಂ ಹಾಗೂ ಮೊಲಿಬೆಡೆನಮ್ ಪ್ರಾಕೃತಿಕವಾಗಿ ಉಂಟಾಗಿರುವುದಾಗಿಪತ್ತೆಯಾಗಿದೆ.
ವಯಸ್ಕರು ಹಾಗೂ ಮಕ್ಕಳು ಕಾನ್ಸರ್ ಗೆ ತುತ್ತಾಗುವ ಅಪಾಯವು ಅತ್ಯಧಿಕ ಪ್ರಮಾಣದಲ್ಲಿದೆ. ಪ್ರಾಕೃತಿಕವಾಗಿ ಜನ್ಯವಾದ ಯುರೇನಿಂ ನ ಜೊತೆ ಕೈಗಾರಿಕಾ ಮೂಲಗಳಿಂದ ವಿಸರ್ಜಿಸಲ್ಪಟ್ಟ ಸೀಸ,ಸತು, ಕೋಬಾಲ್ಟ್ ಹಾಗೂ ಬೇರಿಯಂ ಲೋಹಗಳ ಅಂಶವು ಈ ಅಪಾಯವನ್ನು ಇನ್ನಷ್ಟು ಹೆಚ್ಚಿಸಿದೆ. ಮುಖ್ಯವಾಗಿ ಕೈಗಾರಿಕಾ ನಿಕೆಲ್ ಹಾಗೂ ಕ್ರೋಮಿಯಂನಿಂದಾಗಿ ವಯಸ್ಕರು ಕ್ಯಾನ್ಸರ್ಗೆ ತುತ್ತಾಗುವ ಅಪಾಯ ಇನ್ನಷ್ಟು ಹೆಚ್ಚಿದೆ ಎಂದು ವರದಿ ಹೇಳಿದೆ.
ಭಾರತದಲ್ಲಿ ಕೃಷಿ ಹಾಗೂ ಗೃಹ ಬಳಕೆಗಾಗಿ ಅಂತರ್ಜಲವನ್ನು ಭಾರೀ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆದಾಗ್ಯೂ ತ್ವರಿತಗತಿಯ ನಗರೀಕರಣ, ಕೈಗಾರೀಕರಣ ಹಾಗೂ ಜನಸಂಖ್ಯಾ ಹೆಚ್ಚವು ಅಂತರ್ಜಲದ ಬಳಕೆ ಹೆಚ್ಚಳಕ್ಕೆ ಹಾಗೂ ಅದರ ಗುಣಮಟ್ಟ ಕುಸಿಯುವಂತೆ ಮಾಡಿದೆ.
ಜಾಗತಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಶೇ.80ಕಷ್ಟು ಆರೋಗ್ಯ ಸಮಸ್ಯೆಗಳು ಜಲಜನ್ಯ ಕಾಯಿಲೆಗಳಿಗೆ ಜೊತೆ ನಂಟು ಹೊಂದಿದೆ. ಕಳಪೆ ಗುಣಮಟ್ಟದ ನೀರು ಹಾಗೂ ನೈರ್ಮಲ್ಯದ ಕೊರತೆಯಿಂದಾಗಿ ವಾರ್ಷಿಕವಾಗಿ 15 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.