ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ: ಬಿಜೆಪಿ ಚಿಂತನೆ
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಮಹಾಯುತಿ ಕೂಟದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಚಾರ ಜಟಿಲ ಸಮಸ್ಯೆಯಾಗಿದ್ದು, ಸಿಎಂ ಏಕನಾಥ ಶಿಂಧೆಯವರನ್ನು ಮುಂದುವರಿಸಬೇಕೇ ಅಥವಾ ದೇವೇಂದ್ರ ಫಡ್ನವೀಸ್ ಅವರಿಗೆ ಪಟ್ಟ ಕಟ್ಟಬೇಕೇ ಎಂಬ ಬಗ್ಗೆ ಗೊಂದಲ ಮುಂದುವರಿದಿದೆ. ಆದರೆ ಮುಂಬೈನ ಸಿಎಂ ಅಧಿಕೃತ ನಿವಾಸಕ್ಕೆ ದೇವೇಂದ್ರ ಫಡ್ನವೀಸ್ ಅವರನ್ನು ಶೀಘ್ರವಾಗಿ ಕಳುಹಿಸುವ ಬಗ್ಗೆ ಬಿಜೆಪಿಯಲ್ಲಿ ಚಿಂತನೆ ನಡೆಯುತ್ತಿದೆ.
ಮಹಾಯುತಿ ಕೂಟ ಸರಳ ಬಹುಮತ ಪಡೆದಿದ್ದರೆ, ಶಿಂಧೆ ಮತ್ತೆ ಸಿಎಂ ಆಗುತ್ತಿದ್ದರು. ಆದರೆ ಬಿಜೆಪಿಯ ಅದ್ಭುತ ಪ್ರದರ್ಶನ ಪಕ್ಷದ ಚಿಂತನೆಯನ್ನು ಪರಿವರ್ತಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಎರಡೂವರೆ ವರ್ಷಗಳ ಕಾಲ ಶಿಂಧೆ ಜತೆಗೆ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಫಡ್ನವೀಸ್ ಬಿಜೆಪಿಯ ಅಭೂತಪೂರ್ವ ವಿಜಯಕ್ಕೆ ಕಾರಣರಾಗಿದ್ದರು. ಆದರೆ ಪ್ರಚಾರವನ್ನು ಶಿಂಧೆಯವರ ನಾಯಕತ್ವದಲ್ಲೇ ನಡೆಸಿರುವುದರಿಂದ ಶಿಂಧೆ ನೇತೃತ್ವದ ಶಿವಸೇನೆಗೆ ಬಿಜೆಪಿ ನಿರ್ಧಾರ ಸಂತಸ ತರುವ ಸಾಧ್ಯತೆ ಇಲ್ಲ; ಆದಾಗ್ಯೂ ಬಿಜೆಪಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದೆ ಎಂದು ತಿಳಿದು ಬಂದಿದೆ. ಶಿಂಧೆಯವರ ಲಡ್ಕಿ ಬಹಿನ್ ಯೋಜನೆ ಹಾಗೂ ಕ್ರಿಯಾಶೀಲ ವ್ಯಕ್ತಿ ಎಂಬ ವ್ಯಕ್ತಿತ್ವ ಕೂಡಾ, ಬಿಜೆಪಿಯ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್ ಅವರ ಹಿಂದುತ್ವದ ಪ್ರತಿಪಾದನೆಯಷ್ಟೇ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎನ್ನುವುದು ಶಿವಸೇನೆ ವಿಶ್ಲೇಷಣೆ. ಆದರೆ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಕೂಡಾ ಫಡ್ನವೀಸ್ ಪರ ಒಲವು ತೋರಿಸಿದೆ ಎಂದು ಹೇಳಲಾಗಿದೆ. ಆರೆಸ್ಸೆಸ್ ಒಲವು ಕೂಡಾ ಫಡ್ನವೀಸ್ ಪರವಾಗಿಯೇ ಇದೆ.
ಏಕನಾಥ್ ಶಿಂಧೆ ಸಿಎಂ ಕುರ್ಚಿ ಬಿಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ತಾವೇ ಸಿಎಂ ಆಗಿ ಮುಂದುವರಿದರೆ ಅದು ಮಹಾಯುತಿ ಕೂಟಕ್ಕೆ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಪ್ರಮುಖ ಬಿಎಂಪಿ ಚುನಾವಣೆಗಳಲ್ಲಿ ನೆರವಾಗಲಿದೆ ಎನ್ನುವುದು ಶಿವಸೇನೆ ವಾದ.