ವಿಪತ್ತುಗಳು, ಅಪಘಾತಗಳ ದೃಶ್ಯಾವಳಿಗಳ ಪ್ರಸಾರದ ಸಂದರ್ಭದಲ್ಲಿ ಸಮಯ ಮತ್ತು ದಿನಾಂಕ ಪ್ರದರ್ಶಿಸಿ : ಸುದ್ದಿ ವಾಹಿನಿಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಾಕೀತು
ಹೊಸದಿಲ್ಲಿ : ನೈಸರ್ಗಿಕ ವಿಪತ್ತುಗಳು ಹಾಗೂ ಭಾರಿ ಅಪಘಾತಗಳ ಸಂದರ್ಭದಲ್ಲಿ, ಅಂತಹ ಘಟನೆಗಳನ್ನು ಪ್ರಸಾರ ಮಾಡುವಾಗ ದಿನಾಂಕ ಹಾಗೂ ಸಮಯದ ಮುದ್ರೆಯನ್ನು ದೃಶ್ಯಾವಳಿಗಳ ಮೇಲೆ ಪ್ರದರ್ಶಿಸಿ ಎಂದು ಸೋಮವಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸುದ್ದಿ ಮಾಧ್ಯಮಗಳಿಗೆ ಸಲಹಾ ಸೂಚಿ ಬಿಡುಗಡೆ ಮಾಡಿದೆ.
ದೃಶ್ಯ ವಾಹಿನಿಗಳು ನೈಸರ್ಗಿಕ ವಿಕೋಪಗಳು, ಭಾರಿ ಅಪಘಾತಗಳನ್ನು ಹಲವು ದಿನಗಳ ಕಾಲ ನಿರಂತರವಾಗಿ ಪ್ರಸಾರ ಮಾಡುತ್ತವೆಯಾದರೂ, ಘಟನೆ ಸಂಭವಿಸಿದ ದಿನದ ದೃಶ್ಯಾವಳಿಗಳನ್ನೇ ಪ್ರಸಾರ ಮಾಡುತ್ತವೆ ಎಂಬುದರತ್ತ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬೊಟ್ಟು ಮಾಡಿದೆ.
ದೃಶ್ಯ ವಾಹಿನಿಗಳು ಅಪಘಾತ ಅಥವಾ ವಿಪತ್ತನ್ನು ಪ್ರಸಾರ ಮಾಡುವಾಗ ವರ್ತಮಾನದ ಸಮಯವನ್ನು ಅಗತ್ಯವಾಗಿ ಪ್ರತಿಫಲಿಸುತ್ತಿಲ್ಲ. ಇದರಿಂದ ವೀಕ್ಷಕರಲ್ಲಿ ಅನಗತ್ಯ ಗೊಂದಲ ಹಾಗೂ ಭಾರಿ ಭೀತಿಗೆ ಕಾರಣವಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.
“ಹೀಗಾಗಿ, ವೀಕ್ಷಕರಲ್ಲಿ ತಪ್ಪು ತಿಳಿವಳಿಕೆ ಮೂಡುವುದನ್ನು ತಡೆಯಲು, ಖಾಸಗಿ ಉಪಗ್ರಹ ದೃಶ್ಯ ವಾಹಿನಿಗಳು ವಿಪತ್ತುಗಳು, ನೈಸರ್ಗಿಕ ವಿಕೋಪಗಳು ಅಥವಾ ಭಾರಿ ಅಪಘಾತಗಳ ಸಂದರ್ಭದಲ್ಲಿ, ಆ ದೃಶ್ಯಾವಳಿಗಳ ಮೇಲ್ಭಾಗದಲ್ಲಿ ದಿನಾಂಕ ಮತ್ತು ಸಮಯದ ಮುದ್ರೆಯನ್ನು ಹೊಂದಿರಬೇಕು” ಎಂದು ಸಲಹಾ ಸೂಚಿಯಲ್ಲಿ ಹೇಳಲಾಗಿದೆ.
ದಿನಾಂಕ ಹಾಗೂ ಸಮಯದ ಮುದ್ರೆಯನ್ನು ಪ್ರದರ್ಶಿಸುವುದರಿಂದ, ದೃಶ್ಯಾವಳಿಯ ನಿಖರ ದಿನಾಂಕದ ಬಗ್ಗೆ ಸೂಕ್ತವಾಗಿ ಮಾಹಿತಿ ನೀಡಿದಂತಾಗುತ್ತದೆ ಹಾಗೂ ಘಟನೆ ನಡೆದ ಪ್ರದೇಶದ ನೈಜ ಸಮಯದ ಸ್ಥಿತಿಯನ್ನು ಪ್ರತಿಫಲಿಸುವುದಿಲ್ಲ ಎಂದು ಹೇಳಲಾಗಿದೆ.
ಇಂತಹ ಘಟನೆಗಳನ್ನು ವರದಿ ಮಾಡುವಾಗ ಖಾಸಗಿ ಸುದ್ದಿ ವಾಹಿನಿಗಳು ಕಾರ್ಯಕ್ರಮ ನೀತಿ ಸಂಹಿತೆಗೆ ಬದ್ಧವಾಗಿರುವುದನ್ನು ಖಾತರಿ ಪಡಿಸಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಲಹಾ ಸೂಚಿಯಲ್ಲಿ ಬಲವಾಗಿ ಸಲಹೆ ನೀಡಲಾಗಿದೆ.
ಇತ್ತೀಚೆಗೆ ಕೇರಳದ ವಯನಾಡ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಭೂಕುಸಿತವುಂಟಾಗಿ, ಹಲವರ ಜೀವಗಳು ಬಲಿಯಾಗಿದ್ದವು. ಈ ಘಟನೆಯ ದೃಶ್ಯಾವಳಿಗಳನ್ನು ಸುದ್ದಿ ಮಾಧ್ಯಮಗಳು ವ್ಯಾಪಕವಾಗಿ ಪ್ರಸಾರ ಮಾಡಿದ್ದ ಹಿನ್ನೆಲೆಯಲ್ಲಿ ಈ ಸಲಹಾ ಸೂಚಿ ಬಿಡುಗಡೆಯಾಗಿದೆ.