ಶಿಂದೆ,ಶಿವಸೇನೆ ಶಾಸಕರ ವಿರುದ್ಧ ಅನರ್ಹತೆ ಅರ್ಜಿ: ಮಹಾರಾಷ್ಟ್ರ ಸ್ಪೀಕರ್ ಗೆ ಸುಪ್ರೀಂ ನೋಟಿಸ್
ಹೊಸದಿಲ್ಲಿ: ಕಳೆದ ವರ್ಷದ ಜೂನ್ನಲ್ಲಿ ನೂತನ ಸರಕಾರ ರಚನೆಗಾಗಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಇತರ ಶಿವಸೇನೆ ಶಾಸಕರ ವಿರುದ್ಧ ಸಲ್ಲಿಸಲಾಗಿರುವ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ನಿರ್ದೇಶನ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ಗೆ ನೋಟಿಸನ್ನು ಹೊರಡಿಸಿದೆ. ಎರಡು ವಾರಗಳಲ್ಲಿ ಉತ್ತರಿಸುವಂತೆ ಅದು ಸೂಚಿಸಿದೆ.
ಶಿವಸೇನೆ (ಉದ್ಧವ ಬಾಳಾಸಾಹೇಬ್ ಠಾಕ್ರೆ) ಶಾಸಕ ಸುನಿಲ ಪ್ರಭು ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ನೋಟಿಸನ್ನು ಹೊರಡಿಸಿದೆ. ಅವಿಭಜಿತ ಶಿವಸೇನೆಯ ಮುಖ್ಯ ಸಚೇತಕರಾಗಿದ್ದ ಪ್ರಭು 2022ರಲ್ಲಿ ಶಿಂದೆ ಮತ್ತು ಇತರ ಶಾಸಕರ ವಿರುದ್ಧ ಅನರ್ಹತೆ ಅರ್ಜಿಗಳನ್ನು ಸಲ್ಲಿಸಿದ್ದರು.
ಸರ್ವೋಚ್ಚ ನ್ಯಾಯಾಲಯದ ಮೇ 11ರ ತೀರ್ಪಿನ ಹೊರತಾಗಿಯೂ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಅರ್ಜಿಗಳನ್ನು ಇತ್ಯರ್ಥಗೊಳಿಸುವುದನ್ನು ಉದ್ದೇಶಪೂರ್ವಕವಾಗಿ ವಿಳಂಬಿಸುತ್ತಿದ್ದಾರೆ ಎಂದು ಪ್ರಭು ಆರೋಪಿಸಿದ್ದಾರೆ.