ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರು ಪ್ರಾಣತ್ಯಾಗ ಮಾಡಿದ್ದಾರೆ, ಆರೆಸ್ಸೆಸ್ ಕೊಡುಗೆ ಏನಿದೆ ?: ಸಂಸದೆ ಕನಿಮೋಳಿ ಪ್ರಶ್ನೆ

Update: 2025-03-16 15:33 IST
ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರು ಪ್ರಾಣತ್ಯಾಗ ಮಾಡಿದ್ದಾರೆ, ಆರೆಸ್ಸೆಸ್ ಕೊಡುಗೆ ಏನಿದೆ ?: ಸಂಸದೆ ಕನಿಮೋಳಿ ಪ್ರಶ್ನೆ

ಡಿಎಂಕೆ ಸಂಸದೆ ಕನಿಮೋಳಿ (Photo credit: ANI)

  • whatsapp icon

ಚೆನ್ನೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಹಾಗೂ ಕೇಂದ್ರ ಸರಕಾರದ ನೀತಿಗಳನ್ನು ಡಿಎಂಕೆ ಸಂಸದೆ ಕನಿಮೋಳಿ ಕಟುವಾಗಿ ಟೀಕಿಸಿದ್ದಾರೆ.

ಇಂಡಿಯನ್ ವುಮೆನ್ ಲೀಗ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಆರೆಸ್ಸೆಸ್ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು. ಅಲ್ಲದೆ, ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಪರಿಣಾಮವುಂಟು ಮಾಡುವಂತಹ ಕೇಂದ್ರ ಸರಕಾರದ ಶಾಸನಾತ್ಮಕ ನಿರ್ಧಾರಗಳಿಗೆ ನನ್ನ ವಿರೋಧವಿದೆ ಎಂದು ಪುರುಚ್ಚರಿಸಿದರು.

“ಈ ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂ ಸಮುದಾಯದ ಜನರು ಹೋರಾಟ ನಡೆಸಿದ್ದಾರೆ. ಅವರು ಜೈಲುಗಳಿಗೆ ಹೋಗಿದ್ದು, ದೇಶಕ್ಕಾಗಿ ಹೋರಾಡುವಾಗ ಪ್ರಾಣ ತ್ಯಾಗವನ್ನೂ ಮಾಡಿದ್ದಾರೆ. ಅಂತಹ ಒಬ್ಬ ಆರೆಸ್ಸೆಸ್ ನಾಯಕನನ್ನು ನನಗೆ ತೋರಿಸಿ. ಅವರು (ಆರೆಸ್ಸೆಸ್) ಕ್ಷಮಾಪಣೆ ಪತ್ರ ಬರೆದು ಜೈಲಿನಿಂದ ಹೊರಬಂದಿದ್ದ ಓರ್ವ ವ್ಯಕ್ತಿಯನ್ನು ಮಾತ್ರ ಹೆಸರಿಸುತ್ತಾರೆ. ಆದರೆ, ಅದಕ್ಕಾಗಿ ಅವರು ಒಂದು ಕತೆಯನ್ನು ನಿರೂಪಿಸುತ್ತಾರೆ. ನಾನದನ್ನು ತುಂಬಾ ಇಷ್ಟಪಡುತ್ತೇನೆ: ಸಾವರ್ಕರ್ ಕ್ಷಮಾಪಣೆ ಪತ್ರ ನೀಡಿ, ಜೈಲಿನಿಂದ ಹೊರ ಬಂದರು ಎಂಬುದು ಎಲ್ಲರಿಗೂ ತಿಳಿದಿದ್ದರೂ, ಅವರು (ಆರೆಸ್ಸೆಸ್) ಮಾತ್ರ ಸಾವರ್ಕರ್ ಪಕ್ಷಿಯ ಮೇಲೆ ಕುಳಿತುಕೊಂಡು ಜೈಲಿನಿಂದ ಹೊರಗೆ ಬಂದರು ಎಂದು ಹೇಳುತ್ತಾರೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

“ಇದು ಸುಳ್ಳಿನ ಬಹು ದೊಡ್ಡ ನಿದರ್ಶನ. ಇದೇ ಅವರು ದೇಶಕ್ಕಾಗಿ ಮಾಡಿರುವುದು. ಆದರೆ, ಅವರು ನಮ್ಮತ್ತ ನೋಡಿ, ನಮ್ಮನ್ನು ದೇಶದ್ರೋಹಿಗಳು ಹಾಗೂ ನಗರ ನಕ್ಸಲೀಯರು ಎಂದು ಟೀಕಿಸುತ್ತಾರೆ. ಇತ್ತೀಚೆಗೆ ಕೂಡಾ, ಕೇಂದ್ರ ಸಚಿವರು ನಮ್ಮನ್ನು ಅನಾಗರಿಕರು ಎಂದು ಬಣ್ಣಿಸಿದ್ದರು. ನಿಮಗೆ ನಾಗರಿಕತೆ ಎಂದರೇನು ಎಂಬುದು ತಿಳಿದಿರದೆ ಇರುವುದರಿಂದ, ನೀವು ನಮ್ಮನ್ನು ಅನಾಗರಿಕರು ಎಂದು ಕರೆದಿರುವ ಬಗ್ಗೆ ನಮಗೆ ಹೆಮ್ಮೆಯಿದೆ” ಎಂದೂ ಅವರು ಚಾಟಿ ಬೀಸಿದ್ದಾರೆ.

ಈ ವೇಳೆ, ಕೇಂದ್ರ ಸರಕಾರದ ತ್ರಿವಳಿ ತಲಾಖ್ ಕಾಯ್ದೆಯನ್ನೂ ಟೀಕಿಸಿದ ಕನಿಮೋಳಿ, ಈ ಕಾಯ್ದೆಯು ಮುಸ್ಲಿಂ ಮಹಿಳೆಯರ ಕಲ್ಯಾಣದ ಗುರಿಯನ್ನು ಹೊಂದಿಲ್ಲ, ಬದಲಿಗೆ ಮುಸ್ಲಿಂ ಪುರುಷರನ್ನು ಅಪರಾಧೀಕರಣಗೊಳಿಸುವ ಉದ್ದೇಶ ಹೊಂದಿದೆ ಎಂದೂ ಆರೋಪಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನೂ ಉಲ್ಲೇಖಿಸಿದ ಅವರು, “ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದವು. ಈ ಕಾಯ್ದೆಯು ಹಲವು ವಿಧದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ದಮನಿಸುತ್ತದೆ ಹಾಗೂ ಅವರನ್ನು ದೇಶದ ಶತ್ರುಗಳು ಎಂದು ಬಿಂಬಿಸುತ್ತದೆ. ಆದರೆ, ಮುಸ್ಲಿಂ ಸಮುದಾಯದ ಜನರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದಾರೆ” ಎಂದು ಆರೆಸ್ಸೆಸ್ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News