ಡ್ರೀಮ್ 11ಗೆ ರೂ. 28,000 ಕೋಟಿ ಹಾಗೂ ಪ್ಲೇ ಗೇಮ್ಸ್ 24x7ಗೆ ರೂ. 21,000 ಕೋಟಿ ಜಿಎಸ್ಟಿ ವಂಚನೆ ನೋಟಿಸ್ ಜಾರಿಗೊಳಿಸಿದ ಡಿಜಿಜಿಐ: ವರದಿ
ಹೊಸದಿಲ್ಲಿ: ಡ್ರೀಮ್ 11 ಸಂಸ್ಥೆಗೆ ರೂ. 28,000 ಕೋಟಿ ಹಾಗೂ ಪ್ಲೇ ಗೇಮ್ಸ್ 24x7 ಸಂಸ್ಥೆಗೆ ರೂ. 21,000 ಕೋಟಿ ಜಿಎಸ್ಟಿ ವಂಚನೆಯ ನೋಟಿಸ್ ಅನ್ನು ಪ್ರಧಾನ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ(ಡಿಜಿಜಿಐ)ವು ಜಾರಿಗೊಳಿಸಿದೆ ಎಂದು ವಿಶ್ವಸಾರ್ಹ ಮೂಲಗಳು ತಿಳಿಸಿವೆ ಎಂದು livemint.com ವರದಿ ಮಾಡಿದೆ.
ರಿಯಲ್ ಮನಿ ಗೇಮಿಂಗ್ ವಹಿವಾಟುಗಳ ಮೇಲೆ ವಿಧಿಸಲಾಗುತ್ತಿದ್ದ ಸಂಪೂರ್ಣ ಸಾಂಕೇತಿಕ ಮೌಲ್ಯದ ಮೇಲಿನ ತೆರಿಗೆಯ ಬದಲಿಗೆ ಶೇ. 28ರಷ್ಟು ಜಿಎಸ್ಟಿ ಜಾರಿಯಾಗುತ್ತಿರುವುದರಿಂದ ಪ್ರಧಾನ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯವು ಈ ಕ್ರಮಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.
ಆನ್ ಲೈನ್ ಗೇಮಿಂಗ್ ನ ಮುಂಚೂಣಿ ಸಂಸ್ಥೆಗಳಾದ ಡ್ರೀಮ್ 11 ಹಾಗೂ ಪ್ಲೇ ಗೇಮ್ಸ್ 24x7 ಸಂಸ್ಥೆಗಳಿಗೆ ಪ್ರಧಾನ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯದ ಮುಂಬೈ ಘಟಕವು ನೋಟಿಸ್ ಜಾರಿ ಮಾಡಿದೆ ಎಂದು CNBC TV-18 ವರದಿ ಮಾಡಿದೆ.
ವರದಿಗಳ ಪ್ರಕಾರ, ಇದಕ್ಕೂ ಮುನ್ನ ಮಹಾರಾಷ್ಟ್ರ ಜಿಎಸ್ಟಿ ಪ್ರಾಧಿಕಾರವು, ಡ್ರೀಮ್ 11 ಸಂಸ್ಥೆಗೆ ರೂ. 18,000 ಕೋಟಿ ತೆರಿಗೆ ವಂಚನೆಯ ನೋಟಿಸ್ ಜಾರಿ ಮಾಡಿತ್ತು. ಆದರೆ, ಕೇಂದ್ರದ ನಿಯಂತ್ರಣದಡಿ ಕಾರ್ಯನಿರ್ವಹಿಸುವ ಮುಂಬೈನ ಪ್ರಧಾನ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯವು ರೂ. 28,000 ಕೋಟಿ ತೆರಿಗೆ ವಂಚನೆಯ ನೋಟಿಸ್ ಜಾರಿಗೊಳಿಸಿದೆ.
ರಾಜ್ಯ ಜಿಎಸ್ಟಿ ಇಲಾಖೆಯು ತನಗೆ ನೀಡಿರುವ ತೆರಿಗೆ ವಂಚನೆ ನೋಟಿಸ್ ಅನ್ನು ಪ್ರಶ್ನಿಸಿ ಡ್ರೀಮ್ 11 ಮಾತೃ ಸಂಸ್ಥೆಯಾದ ಡ್ರೀಮ್ ಸ್ಪೋರ್ಟ್ಸ್ ಬಾಂಬೆ ಹೈಕೋರ್ಟ್ ಮೊರೆ ಹೋದ ಸುಮಾರು ಒಂದು ವಾರದ ನಂತರ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಡ್ರೀಮ್ 11 ಸಂಸ್ಥೆಗೆ ಜಾರಿಗೊಳಿಸಿರುವ ತೆರಿಗೆ ವಂಚನೆ ನೋಟಿಸ್, ಈವರೆಗೆ ಯಾವುದೇ ಸಂಸ್ಥೆಗೆ ಜಾರಿಗೊಳಿಸಲಾಗಿರುವ ಅತ್ಯಧಿಕ ಮೊತ್ತದ ತೆರಿಗೆ ವಂಚನೆ ನೋಟಿಸ್ ಆಗಿದೆ. ಉದಾಹರಣೆಗೆ, ಕಳೆದ ವರ್ಷ ಬೆಂಗಳೂರು ಮೂಲದ ಗೇಮ್ಸ್ ಕ್ರಾಫ್ಟ್ ಸಂಸ್ಥೆಗೆ ಜಾರಿಗೊಳಿಸಲಾಗಿದ್ದ ರೂ. 21,000 ಕೋಟಿ ತೆರಿಗೆ ವಂಚನೆಯ ನೋಟಿಸ್ ಈವರೆಗೆ ಜಾರಿಯಾಗಿದ್ದ ಅತ್ಯಧಿಕ ಮೌಲ್ಯದ ತೆರಿಗೆ ವಂಚನೆಯ ನೋಟಿಸ್ ಆಗಿತ್ತು.