ಆಂಧ್ರಪ್ರದೇಶವನ್ನು ಭಾರತದ ಡ್ರೋನ್ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಗುವುದು : ವರದಿ
ಅಮರಾವತಿ : ರಾಜ್ಯ ಸರಕಾರವು ನವೆಂಬರ್ ಅಂತ್ಯದೊಳಗೆ ಆಂಧ್ರಪ್ರದೇಶ ಡ್ರೋನ್ ನೀತಿಯನ್ನು ಸಿದ್ಧಪಡಿಸಲಿದ್ದು, ಆಂಧ್ರಪ್ರದೇಶವನ್ನು ಭಾರತದ ಡ್ರೋನ್ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಆಂಧ್ರಪ್ರದೇಶದ ಪ್ರಧಾನ ಕಾರ್ಯದರ್ಶಿ (ಮೂಲಸೌಕರ್ಯ ಮತ್ತು ಹೂಡಿಕೆ) ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಅಮರಾವತಿಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ವಿಶ್ವ ಶೃಂಗ ಸಭೆಯನ್ನುದ್ದೇಶಿಸಿ ಸೋಮವಾರ ಮಾತನಾಡಿದ ಅವರು, ರಾಜ್ಯದಲ್ಲಿ ಡ್ರೋನ್ ಕಾರ್ಯಾಚರಣೆಯ ಕುರಿತು ಸುಮಾರು 20,000 ಮಂದಿಗೆ ತರಬೇತಿ ನೀಡಲಾಗುವುದು. ತರಬೇತಿಯು 24 ಕಾರ್ಯಾಚರಣೆಗಳನ್ನು ಒಳಗೊಂಡಿರಲಿದೆ ಎಂದು ತಿಳಿಸಿದ್ದಾರೆ.
ಡ್ರೋನ್ ಶೃಂಗ ಸಭೆಗೆ 6,929 ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ಶೃಂಗ ಸಭೆಯ ಸಂದರ್ಭದಲ್ಲಿ ತಯಾರಿಕೆ, ಸಂಶೋಧನೆ, ಪರೀಕ್ಷೆ ಹಾಗೂ ಇನ್ನಿತರ ವಿಷಯಗಳ ಕುರಿತು ಪ್ಯಾನೆಲ್ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
“ಡ್ರೋನ್ ಸಾಧನಗಳ ಬಳಕೆಯನ್ನು ಸುಧಾರಿಸುವುದು ನಮ್ಮ ಗುರಿಯಾಗಿದೆ. ಸದ್ಯ ಡ್ರೋನ್ ಗಳನ್ನು ಕೃಷಿ, ಕಾನೂನು ಮತ್ತು ಸುವ್ಯವಸ್ಥೆ, ಆರೋಗ್ಯ ಸೇವೆ, ಭದ್ರತೆ ಹಾಗೂ ಇನ್ನಿತರ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ, ಐಒಟಿ, ಯಂತ್ರ ಕಲಿಕೆ ಹಾಗೂ ಇನ್ನಿತರ ಉದ್ದೇಶಗಳಿಗೂ ಡ್ರೋನ್ ಅನ್ನು ಬಳಸಬಹುದಾಗಿದೆ” ಎಂದು ಸುರೇಶ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಈ ನಡುವೆ, ಡ್ರೋನ್ ಗಳ ಬಳಕೆ, ಡ್ರೋನ್ ಗಳ ಬಳಕೆಯಿಂದಾಗುವ ಪ್ರಯೋಜನ, ಡ್ರೋನ್ ನಿಗಮದಿಂದ ಬೇಕಿರುವ ನೆರವು ಹಾಗೂ ಬೇಡಿಕೆಯ ಕುರಿತು ಮಾಹಿತಿ ಸಲ್ಲಿಸುವಂತೆ ಎಲ್ಲ ಸರಕಾರಿ ಇಲಾಖೆಗಳಿಗೆ ಆಂಧ್ರಪ್ರದೇಶ ಡ್ರೋನ್ ನಿಗಮ ಪತ್ರ ಬರೆದಿದೆ.