ಗುಜರಾತ್ |‌ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ವಾಹನಗಳಿಗೆ ಢಿಕ್ಕಿ; ಓರ್ವ ಮಹಿಳೆ ಮೃತ್ಯು, ಹಲವರಿಗೆ ಗಾಯ

Update: 2025-03-14 15:04 IST
ಗುಜರಾತ್ |‌ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ವಾಹನಗಳಿಗೆ ಢಿಕ್ಕಿ; ಓರ್ವ ಮಹಿಳೆ ಮೃತ್ಯು, ಹಲವರಿಗೆ ಗಾಯ

Screengrab:X/@NamaskarGujarat

  • whatsapp icon

ವಡೋದರ: ಮದ್ಯದ ಅಮಲಿನಲ್ಲಿದ್ದ ಕಾನೂನು ವಿದ್ಯಾರ್ಥಿಯೊಬ್ಬ ತನ್ನ ಕಾರನ್ನು ವೇಗವಾಗಿ ಚಲಾಯಿಸಿ, ಹಲವು ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ, ಓರ್ವ ಮಹಿಳೆ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ವಡೋದರದ ಕರೈಲಿಬಾಗ್ ನಲ್ಲಿ ನಡೆದಿದೆ.

ಆರೋಪಿ ಚಾಲಕನನ್ನು ಎಂಎಸ್ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿ ರಕ್ಷಿತ್ ರವೀಶ್ ಚೌರಾಸಿಯಾ ಎಂದು ಗುರುತಿಸಲಾಗಿದ್ದು, ಮದ್ಯದ ಅಮಲಿನಲ್ಲಿದ್ದ ಆತ, ತನ್ನ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದರಲ್ಲಿ ಕಾರು ತೀಕ್ಷ್ಣ ತಿರುವು ತೆಗೆದುಕೊಳ್ಳುವುದಕ್ಕೂ ಮುನ್ನ, ಗಂಟೆಗೆ 100 ಕಿಮೀಗಿಂತ ಹೆಚ್ಚು ವೇಗವಾಗಿ ಚಲಿಸುತ್ತಿರುವುದು ಸೆರೆಯಾಗಿದೆ. ಈ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿತರ ನಾಲ್ವರಿಂದ ಐದು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಮೂರು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಕಾರು ಮಾಲಕ ಪ್ರಾಂಶು ಚೌಹಾಣ್ ರೊಂದಿಗೆ ಕಾರಿನಲ್ಲಿ ಕುಡಿತದ ಮತ್ತಿನಲ್ಲಿ ಕುಳಿತಿದ್ದ ಚಾಲಕ ರಕ್ಷಿತ್ ರವೀಸ್ ಚೌರಾಸಿಯಾ, ಅಪಘಾತದ ನಂತರ, ‘ಮತ್ತೊಂದು ರೌಂಡ್’, ‘ಓಂ ನಮಃ ಶಿವಾಯ’ ಎಂದು ಕೂಗಾಡಿದ್ದಾನೆ. ಈ ವೇಳೆ ಬಿಳಿ ಟೀ ಶರ್ಟ್ ಧರಿಸಿ ಕಾರಿನಲ್ಲಿ ಕುಳಿತಿದ್ದ ಪ್ರಾಂಶು ಚೌಹಾಣ್, ಆತನಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದು, “ಕಾರನ್ನು ಆತ ಚಲಾಯಿಸುತ್ತಿದ್ದನೇ ಹೊರತು ನಾನಲ್ಲ” ಎಂದು ಸಮಜಾಯಿಷಿ ನೀಡಿದ್ದಾರೆ. ರಕ್ಷಿತ್ ರವೀಶ್ ಚೌರಾಸಿಯಾನ ಬೇಜವಾಬ್ದಾರಿ ವರ್ತನೆಯಿಂದ ಕುಪಿತಗೊಂಡ ದಾರಿಹೋಕರು, ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸುವುದಕ್ಕೂ ಮುನ್ನ ಆತನಿಗೆ ಮನಬಂದಂತೆ ಥಳಿಸಿದ್ದಾರೆ.

ರಕ್ಷಿತ್ ರವೀಶ್ ಚೌರಾಸಿಯಾನನ್ನು ಬಂಧಿಸಲಾಗಿದ್ದು, ಅಲ್ಲಿಂದ ಪರಾರಿಯಾಗಿರುವ ಪ್ರಾಂಶು ಚೌಹಾಣ್ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಅಪಘಾತವೆಸಗಿದ ಕಾರು ಡಿಯೋನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಹೆಸರಲ್ಲಿ ನೋಂದಣಿಗೊಂಡಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News