ಛತ್ತೀಸ್‍ಗಢ ಸಿಎಂ ಆಪ್ತರ ಮನೆ ಮೇಲೆ ಇ.ಡಿ. ದಾಳಿ
ರಾಯಪುರ: ಛತ್ತೀಸ್‍ಗಢ ವಿಧಾನಸಭಾ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿ ಉಳಿದಿದ್ದು, ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ರಾಜಕೀಯ ಸಲಹೆಗಾರ, ಇಬ್ಬರು ವಿಶೇಷ ಕರ್ತವ್ಯಾಧಿಕಾರಿಗಳು ಮತ್ತು ಭಿಲಾಯ್ ಮೂಲದ ಉದ್ಯಮಿಯೊಬ್ಬರ ಮನೆಯ ಮೇಲೆ ಕಾನೂನು ಜಾರಿ ನಿರ್ದೇಶನಾಲಯ ಬುಧವಾರ ದಾಳಿ ನಡೆಸಿದೆ. ಹಣ ದುರ್ಬಳಕೆ ತಡೆ ಪ್ರಕರಣಗಳ ಸಂಬಂಧ ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ನಿರ್ದೇಶನಾಲಯ ಇನ್ನೂ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಸುಮಾರು 5000 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಸಿದ ವಿವಾದಾತ್ಮಕ ಆನ್‍ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ 'ಮಹಾದೇವ ಆ್ಯಪ್'ಗೆ ಸಂಬಂಧಿಸಿದಂತೆ ಮಂಗಳವಾರ ಹಾಗೂ ಬುಧವಾರ ಶೋಧ ನಡೆಸಲಾಗಿದೆ ಎಂದು ಉನ್ನತ ಮೂಲಗಳು ವಿವರಿಸಿವೆ.
ಭೂಪೇಶ್ ಬಘೇಲ್ ಅವರ ನಿಕಟ ಸಂಬಂಧಿ ಹಾಗೂ ಅವರ ರಾಜಕೀಯ ಸಲಹೆಗಾರ, ವಿಶೇಷ ಕರ್ತವ್ಯಾಧಿಕಾರಿಗಳಾದ ಆಶೀರ್ಶ ವರ್ಮಾ ಹಾಗೂ ಮನೀಶ್ ಬಂಚೋರ್, ಸಿಎಂ ಆಪ್ತ ಹಾಗೂ ಸ್ಥಳೀಯ ಉದ್ಯಮಿ ವಿಜಯ್ ಭಾಟಿಯಾ ಅವರ ಮನೆಗಳ ಮೇಲೆ ಬಘೇಲ್ ಅವರ ಹುಟ್ಟುಹಬ್ಬದಂದು ದಾಳಿ ನಡೆದಿದೆ.
"ಮಾನ್ಯ ಪ್ರಧಾನಿ ಹಾಗೂ ಅಮಿತ್ ಶಾ ಅವರೇ, ನನ್ನ ಹುಟ್ಟುಹಬ್ಬದ ದಿನದಂದು ನನ್ನ ರಾಜಕೀಯ ಸಲಹೆಗಾರ, ಓಎಸ್‍ಡಿಗಳು, ಆಪ್ತರ ಮನೆಗಳ ಶೋಧಕ್ಕೆ ಇ.ಡಿ. ತಂಡವನ್ನು ಕಳುಹಿಸಿಕೊಡುವ ಮೂಲಕ ಅಮೂಲ್ಯ ಉಡುಗೊರೆ ನೀಡಿದ್ದಕ್ಕಾಗಿ ಕೃತಜ್ಞತೆಗಳು ಎಂದು ಬಘೇಲ್ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಈ ದಾಳಿಯನ್ನು ಖಂಡಿಸಿದ್ದು, "ಕಾಂಗ್ರೆಸ್ ಪಕ್ಷವನ್ನು ಬೆದರಿಸುವ ಮತ್ತು ಅಸ್ಥಿರಗೊಳಿಸುವ ಕೊಳಕು ತಂತ್ರಗಳನ್ನು ಬಿಜೆಪಿ ಅನುಸರಿಸುತ್ತಿದೆ" ಎಂದು ಬಣ್ಣಿಸಿದ್ದಾರೆ. "ನಮಗೆ ಛತ್ತೀಸ್‍ಗಢದ ಮೂರು ಕೋಟಿ ಮಂದಿಯ ಬೆಂಬಲ ಇದೆ. ಇಂಥ ಅಗ್ಗದ ತಂತ್ರಗಳು ಯಾವ ಪರಿಣಾಮವನ್ನೂ ಬೀರುವುದಿಲ್ಲ. ಇದು ಬಿಜೆಪಿಯ ಹತಾಶೆಯನ್ನಷ್ಟೇ ತೋರಿಸುತ್ತದೆ" ಎಂದು ಕುಟುಕಿದ್ದಾರೆ.