ನನಗೆ ಚಿತ್ರಹಿಂಸೆ ನೀಡಲು ಈಡಿ ಬಯಸಿದೆ: ಕೋರ್ಟ್ ಗೆ ಸಂಸದ ಸಂಜಯ ಸಿಂಗ್ ದೂರು
ಹೊಸದಿಲ್ಲಿ : ತನಗೆ ಚಿತ್ರಹಿಂಸೆ ನೀಡಲು ಸ್ಥಳೀಯ ಪೋಲಿಸ್ ಠಾಣೆಯ ಲಾಕಪ್ ಗೆ ತನ್ನನ್ನು ಸ್ಥಳಾಂತರಿಸಲು ಜಾರಿ ನಿರ್ದೇಶನಾಲಯ (ಈಡಿ)ವು ಸುಳ್ಳು ಕಾರಣಗಳನ್ನು ಸೃಷ್ಟಿಸಿದೆ ಎಂದು ಆರೋಪಿಸಿ ಆಪ್ ಸಂಸದ ಸಂಜಯ ಸಿಂಗ್ ಅವರು ದಿಲ್ಲಿಯ ನ್ಯಾಯಾಲಯವೊಂದರಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ದಿಲ್ಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗ್ ಅವರನ್ನು ಈ.ಡಿ.ಬುಧವಾರ ಬಂಧಿಸಿತ್ತು. ಗುರುವಾರ ನ್ಯಾಯಾಲಯವು ಅವರಿಗೆ ಅ.10ರವರೆಗೆ ಐದು ದಿನಗಳ ಈ.ಡಿ.ಕಸ್ಟಡಿಯನ್ನು ವಿಧಿಸಿತ್ತು.
ಗುರುವಾರ ತಡರಾತ್ರಿ ತನ್ನನ್ನು ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಈ.ಡಿ.ಕೇಂದ್ರ ಕಚೇರಿಯಿಂದ ತುಘ್ಲಕ್ ರೋಡ್ ಪೋಲಿಸ್ ಠಾಣೆಗೆ ಸ್ಥಳಾಂತರಿಸಲು ಪ್ರಯತ್ನಿಸಲಾಗಿತ್ತು. ತನ್ನನ್ನು ಇರಿಸಲಾಗಿದ್ದ ಲಾಕಪ್ ಗೆ ಕೀಟನಾಶಕವನ್ನು ಸಿಂಪಡಿಸಬೇಕಿದೆ ಎಂಬ ಕಾರಣವನ್ನು ಅಧಿಕಾರಿಗಳು ನೀಡಿದ್ದರು ಎಂದು ತನ್ನ ಅರ್ಜಿಯಲ್ಲಿ ಆರೋಪಿಸಿರುವ ಸಿಂಗ್,ಒಂದು ವೇಳೆ ಒಂದು ಲಾಕಪ್ ಗೆ ಕೀಟನಾಶಕ ಸಿಂಪಡಿಸಬೇಕಿದ್ದರೂ ತನಗಾಗಿ ಈ.ಡಿ.ಕೇಂದ್ರ ಕಚೇರಿಯಲ್ಲಿ ಪರ್ಯಾಯ ವ್ಯವಸ್ಥೆಯಿರಬೇಕಿತ್ತು ಎಂದು ಹೇಳಿದ್ದಾರೆ.
ಪ್ರಧಾನ ತನಿಖಾ ಸಂಸ್ಥೆ ಎಂದು ಹೇಳಿಕೊಳ್ಳುವ ಈಡಿ ತನ್ನ ಇಡೀ ಕೇಂದ್ರ ಕಚೇರಿಯಲ್ಲಿ ಕೇವಲ ಒಂದು ಲಾಕಪ್ ಹೊಂದಿರುವುದು ತರ್ಕಕ್ಕೆ ನಿಲುಕದ ವಿಷಯವಾಗಿದೆ ಎಂದು ಅರ್ಜಿಯಲ್ಲಿ ಹೇಳಿರುವ ಸಿಂಗ್, ಸ್ಥಳಾಂತರಗೊಳ್ಳಲು ತಾನು ನಿರಾಕರಿಸಿದ್ದರಿಂದ ತನ್ನನ್ನು ಲಾಕಪ್ ಹೊರಗೆ ಮಲಗುವಂತೆ ಮಾಡಲಾಗಿತ್ತು ಮತ್ತು ತನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.
ಸಿಸಿಟಿವಿಗಳ ಅನುಪಸ್ಥಿತಿಯಲ್ಲಿ ತನಗೆ ಚಿತ್ರಹಿಂಸೆ ನೀಡಲು ತುಘ್ಲಕ್ ರೋಡ್ ಪೋಲಿಸ್ ಠಾಣೆಗೆ ಸ್ಥಳಾಂತರಿಸಲು ಸುಳ್ಳು ಕಾರಣವನ್ನು ಈಡಿ ಸೃಷ್ಟಿಸಿತ್ತು ಎಂದು ಸಿಂಗ್ ಶಂಕಿಸಿದ್ದಾರೆ.
ಸಿಸಿಟಿವಿ ಇರುವ ಸ್ಥಳದಲ್ಲಿ ಮಾತ್ರ ಸಿಂಗ್ ಅವರ ವಿಚಾರಣೆ ನಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ತನ್ನ ಗುರುವಾರದ ಆದೇಶದಲ್ಲಿ ಈಡಿಗೆ ಸೂಚಿಸಿದ್ದ ನ್ಯಾಯಾಲಯವು,ಸಿಸಿಟಿವಿ ದೃಶ್ಯಾವಳಿಗಳನ್ನು ನಂತರ ಸಂರಕ್ಷಿಸಿಡಬಹುದು ಎಂದು ಹೇಳಿತ್ತು.