ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗದಿದ್ದರೆ ಶಿವಸೇನೆಯ ಯಾವುದೇ ಶಾಸಕರು ನೂತನ ಸರ್ಕಾರದ ಭಾಗವಾಗುವುದಿಲ್ಲ: ಉದಯ್ ಸಮಂತ್
ಮುಂಬೈ: ಮಹಾರಾಷ್ಟ್ರದ ನೂತನ ಸರ್ಕಾರದಲ್ಲಿ ಏಕನಾಥ್ ಶಿಂಧೆ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸದಿದ್ದಲ್ಲಿ ಪಕ್ಷದ ಯಾವುದೇ ಶಾಸಕರು ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ ಎಂದು ಶಿವಸೇನೆ(ಶಿಂಧೆ ಬಣ) ನಾಯಕ ಉದಯ್ ಸಮಂತ್ ಗುರುವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಪಡ್ನವೀಸ್ ಪ್ರಮಾಣ ವಚನಕ್ಕೆ ಕೆಲವೇ ಗಂಟೆಗಳು ಬಾಕಿಯಿರುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆ ನಾಯಕ ಉದಯ್ ಸಮಂತ್, ಶಿವಸೇನೆಯ ಯಾವುದೇ ಶಾಸಕರು ಉಪ ಮುಖ್ಯಮಂತ್ರಿಯಾಗಬೇಕೆಂಬ ಇಚ್ಚೆಯನ್ನು ಹೊಂದಿಲ್ಲ, ಶಿಂಧೆ ಮಾತ್ರ ಆ ಹುದ್ದೆಯನ್ನು ಅಲಂಕರಿಸಬೇಕು ಎಂದು ಹೇಳಿದ್ದಾರೆ.
ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರಿಗೆ ಉಪ ಮುಖ್ಯಮಂತ್ರಿಯಾಗಿ ಹೊಸ ಸರ್ಕಾರವನ್ನು ಸೇರಲು ಇಚ್ಚೆಯಿಲ್ಲ ಎನ್ನಲಾಗಿದೆ.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರು ಗುರುವಾರ ಸಂಜೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅದ್ದೂರಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.