ರೈತರಿಗೆ ಆರ್ಥಿಕ ನೆರವು ವಿತರಿಸಲು ತೆಲಂಗಾಣ ಸರಕಾರಕ್ಕೆ ನೀಡಿದ ಅನುಮತಿ ವಾಪಸ್ : ಚುನಾವಣಾ ಆಯೋಗ
ಹೈದರಾಬಾದ್: ರೈತು ಬಂಧು ಯೋಜನೆಯಡಿಯಲ್ಲಿ ರಬಿ ಬೆಳೆಗಳಿಗಾಗಿ ರೈತರಿಗೆ ಹಣಕಾಸು ನೆರವು ವಿತರಿಸಲು ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ ಸರಕಾರಕ್ಕೆ ನೀಡಿರುವ ಅನುಮತಿಯನ್ನು ಚುನಾವಣಾ ಆಯೋಗವು ಸೋಮವಾರ ಹಿಂದಕ್ಕೆ ಪಡೆದುಕೊಂಡಿದೆ.
ರಾಜ್ಯ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದ್ದು, ಅಲ್ಲಿ ಮಾದರಿ ನೀತಿ ಸಂಹಿತೆಯನ್ನು ಜಾರಿಗೆ ತರಲಾಗಿದೆ. ಮತಗಳ ಎಣಿಕೆ ಡಿಸೆಂಬರ್ 3ರಂದು ನಡೆಯಲಿದೆ.
ಈ ಯೋಜನೆಯ ಬಗ್ಗೆ ಸಾರ್ವಜನಿಕವಾಗಿ ಘೋಷಣೆ ಮಾಡುವ ಮೂಲಕ ರಾಜ್ಯ ಹಣಕಾಸು ಸಚಿವ ಟಿ. ಹರೀಶ್ ರಾವ್ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬುದಾಗಿ ಚುನಾವಣಾ ಆಯೋಗ ಆರೋಪಿಸಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಈ ಯೋಜನೆಯಡಿ, ರೈತರ ಸಾಲವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ನೆರವು ಒದಗಿಸಲಾಗುತ್ತದೆ. ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಇತರ ಅಗತ್ಯ ವಸ್ತುಗಳ ಖರೀದಿಗೆ ಪ್ರತಿ ರೈತನಿಗೆ ಪ್ರತಿಯೊಂದು ಋತುವಿನಲ್ಲಿ ಎಕರೆಗೆ 5,000 ರೂ. ನೆರವು ನೀಡಲಾಗುತ್ತದೆ.
ಸುಮಾರು 70 ಲಕ್ಷ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಹಣಕಾಸು ನೆರವು ನೀಡುವುದನ್ನು ಮುಂದುವರಿಸಲು ಚುನಾವಣಾ ಆಯೋಗವು ನವೆಂಬರ್ 24ರಂದು ರಾಜ್ಯ ಸರಕಾರಕ್ಕೆ ಅನುಮತಿ ನೀಡಿತ್ತು. ಆದರೆ, ಯೋಜನೆಗೆ ಹೊಸ ಫಲಾನುಭವಿಗಳನ್ನು ಸೇರಿಸಿಕೊಳ್ಳಬಾರದು ಮತ್ತು ಚುನಾವಣಾ ಸಭೆಗಳಲ್ಲಿ ಯೋಜನೆಯ ಪ್ರಚಾರ ಮಾಡಬಾರದು ಎಂಬ ಶರತ್ತುಗಳನ್ನು ಅದು ವಿಧಿಸಿತ್ತು.
ಆದರೆ, ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ರ ಸೋದರಳಿಯ ಟಿ. ಹರೀಶ್ ರಾವ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆಯೋಗ ಆರೋಪಿಸಿದೆ ಹಾಗೂ ರೈತರಿಗೆ ನೆರವು ನಿಧಿ ವಿತರಿಸುವುದಕ್ಕೆ ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆದುಕೊಂಡಿದೆ.