ನಾಳೆ (ಡಿ.3) 4 ರಾಜ್ಯಗಳ ಚುನಾವಣಾ ಫಲಿತಾಂಶ

Update: 2023-12-02 16:01 GMT

ಸಾಂದರ್ಭಿಕ ಚಿತ್ರ |Photo: PTI 

ಹೊಸದಿಲ್ಲಿ: ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ ರಾಜ್ಯಗಳ ವಿಧಾನಸಭೆಗಳಿಗೆ ನವೆಂಬರ್ 7ರಿಂದ ನವೆಂಬರ್ 30ರ ನಡುವೆ ನಡೆದ ಚುನಾವಣೆಗಳ ಫಲಿತಾಂಶ ರವಿವಾರ ಪ್ರಕಟವಾಗಲಿದೆ. ಈ ಐದೂ ರಾಜ್ಯಗಳಲ್ಲಿ ಬೆಳಗ್ಗೆ 8:00 ಗಂಟೆಗೆ ಸರಿಯಾಗಿ ಮತಏಣಿಕೆ ಆರಂಭವಾಗಲಿದೆ. ಮಿಜೋರಾಂನಲ್ಲಿ ರವಿವಾರ ಮತಎಣಿಕೆ ನಡೆಸುವುದನ್ನು ವಿರೋಧಿಸಿ ಚುನಾವಣಾ ಆಯೋಗಕ್ಕೆ ಹಲವಾರು ಅಹವಾಲುಗಳು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಆ ರಾಜ್ಯದಲ್ಲಿ ಮತಎಣಿಕೆ ಸೋಮವಾರ ನಡೆಯಲಿದೆ.

ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಗೆ 15.9 ಕೋಟಿಗೂ ಅಧಿಕ ಮತದಾರರು ಹಕ್ಕು ಚಲಾಯಿಸಿದ್ದರು. ಕೇವಲ ಮೂರು ತಿಂಗಳ ಆನಂತರ ನಡೆಯಲಿರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಈ ಪಂಚರಾಜ್ಯ ಚುನಾವಣೆಗಳ ಫಲಿತಾಂಶಗಳು ಬಣ್ಣಿಸಲ್ಪಟ್ಟಿವೆ. ಚತ್ತೀಸ್ ಗಡ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ತೆಲಂಗಾಣ ವಿಧಾನಸಭೆಗಳ ಅವಧಿಯು ಮುಂದಿನ ವರ್ಷದ ಜನವರಿಯಲ್ಲಿ ಮುಕ್ತಾಯಗೊಳ್ಳಲಿದೆ.

ಕೇಂದ್ರದ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಿಗೆ ಈ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮಹತ್ವದಾಗಿದೆ. ಹಿಂದಿಭಾಷಿಕ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ 2018ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಎದುರು ಸೋಲುಂಡ ಬಿಜೆಪಿ ಈ ಬಾರಿ ಜಯಭೇರಿ ಬಾರಿಸಲು ಶತಾಯಗತಾಯ ಯತ್ನಿಸಿದೆ. ಕರ್ನಾಟಕ ಹಾಗೂ ಹಿಮಾಚಲ ಪ್ರದೇಶಗಳ ವಿಧಾನಸಭಾ ಚುನಾವಣೆಗಳಲ್ಲಿ ಸೋಲಿನ ಆಘಾತದ ಬಳಿಕ ಬಿಜೆಪಿಗೆ ನೈತಿಕ ಸ್ಥೈರ್ಯ ಪಡೆಯಲು ಈ ವಿಜಯ ಅತ್ಯಗತ್ಯವಾಗಿದೆ ಎಂದು ರಾಜಕೀಯ ವಿಶ್ಲೇಷಕರ ಅನಿಸಿಕೆಯಾಗಿದೆ.

ಕರ್ನಾಟಕದಲ್ಲಿ ತನಗೆ ದೊರೆತ ಭರ್ಜರಿ ಗೆಲುವಿನಿಂದ ಉತ್ತೇಜಿತವಾಗಿರುವ ಕಾಂಗ್ರೆಸ್, ಈ ಚುನಾವಣೆಗಳಲ್ಲಿಯೂ ತನ್ನ ಗೆಲುವಿನ ಸರಣಿಯನ್ನು ಮುಂದುವರಿಸುವ ತವಕದಲ್ಲಿದೆ.

ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಹಾಗೂ ಛತ್ತೀಸ್ ಗಡದಲ್ಲಿ ಭೂಪೇಶ್ ಬಘೆಲ್ ನೇತೃತ್ವದ ಕಾಂಗ್ರೆಸ್ ಸರಕಾರಗಳಿದ್ದರೆ, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿಯ ಆಳ್ವಿಕೆಯಿದೆ. ತೆಲಂಗಾಣದಲ್ಲಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ BRS ಪಕ್ಷದ ಆಡಳಿತವಿದೆ.

ಚತ್ತೀಸ್ಗಡದ ವಿಧಾನಸಭೆಗಳಿಗೆ ನವೆಂಬರ್ 7 ಹಾಗೂ 17ರಂದು ಹಾಗೂ ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ಮತದಾನವಾಗಿತ್ತು. ರಾಜಸ್ತಾನದಲ್ಲಿ ನವೆಂಬರ್ 25 ಹಾಗೂ ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News