ಮಾಸಿಕ ಜಿಎಸ್‌ಟಿ ದತ್ತಾಂಶ ಬಿಡುಗಡೆಯನ್ನು ಸ್ಥಗಿತಗೊಳಿಸಿದ ಕೇಂದ್ರ ಸರಕಾರ!

Update: 2024-07-09 15:56 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಜುಲೈ 1ಕ್ಕೆ ಜಿಎಸ್‌ಟಿ ಜಾರಿಯಾಗಿ ಏಳು ವರ್ಷಗಳಾಗಿದ್ದು, ಈ ನಡುವೆ ಕೇಂದ್ರ ಸರಕಾರವು ಮಾಸಿಕ ಜಿಎಸ್‌ಟಿ ದತ್ತಾಂಶ ಬಿಡುಗಡೆಯನ್ನು ಸ್ಥಗಿತಗೊಳಿಸಿರುವುದು ಹುಬ್ಬೇರುವಂತೆ ಮಾಡಿದೆ.

ಕೇಂದ್ರ ಹಣಕಾಸು ಸಚಿವಾಲಯವು ಪ್ರತಿ ತಿಂಗಳ ಒಂದನೇ ತಾರೀಕಿನಂದು ಜಿಎಸ್‌ಟಿ ಸಂಗ್ರಹದ ಕುರಿತು ಸಮಗ್ರ ಪಕ್ಷಿನೋಟ ಹೊಂದಿರುವ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡುತ್ತಾ ಬಂದಿತ್ತು.

ಜೂನ್ 1ರಂದು ಪತ್ರಿಕಾ ಮಾಹಿತಿ ದಳ ಬಿಡುಗಡೆ ಮಾಡಿದ್ದ ಮೇ ತಿಂಗಳ ಜಿಎಸ್‌ಟಿ ಸಂಗ್ರಹದ ದತ್ತಾಂಶ ಇತ್ತೀಚೆಗೆ ಬಿಡುಗಡೆಗೊಂಡ ದತ್ತಾಂಶವಾಗಿದೆ.

ಆದರೆ, ಜೂನ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ರೂ. 1.74 ಲಕ್ಷ ಕೋಟಿಯಾಗಿದ್ದರೂ, ಈ ಮಾಹಿತಿಯನ್ನು ಅಧಿಕೃತ ಪತ್ರಿಕಾ ಪ್ರಕಟಣೆಯ ಮೂಲಕ ಹಂಚಿಕೊಳ್ಳಲಾಗಿಲ್ಲ. ಬದಲಿಗೆ ವರದಿಗಾರರಿಗೆ ಅನಧಿಕೃತವಾಗಿ ಮಾತ್ರ ಒದಗಿಸಲಾಗಿದೆ.

ಭವಿಷ್ಯದಲ್ಲಿ ಒಟ್ಟಾರೆ ಸಂಗ್ರಹಗೊಂಡ ಮೊತ್ತದ ವಿವರವನ್ನು ಮಾತ್ರ ಹಂಚಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ ಎಂದು businesstoday.in ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮೂರನೆ ಅವಧಿಯ ಪ್ರಥಮ ಬಜೆಟ್ ಮಂಡನೆಯಾಗಲು ಇನ್ನು ಕೆಲವೇ ವಾರಗಳು ಬಾಕಿ ಇರುವಾಗ ಇಂತಹ ನಡೆಯನ್ನು ಯಾಕೆ ಅನುಸರಿಸಲಾಗಿದೆ ಎಂಬ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಕಾರಣವನ್ನು ನೀಡಲಾಗಿಲ್ಲ. ಬೆಲೆಯೇರಿಕೆ ಹಾಗೂ ಬಳಕೆಯ ಪ್ರಮಾಣ ತಗ್ಗುತ್ತಿರುವುದು ತೆರಿಗೆ ರಿಯಾಯಿತಿ ಬೇಡಿಕೆಗೆ ಕಾರಣವಾಗಿದೆ. ಆರೋಗ್ಯ ವಿಮೆ ಸೇರಿದಂತೆ ಹಲವಾರು ಸೇವೆಗಳ ಮೇಲೆ ದೊಡ್ಡ ಪ್ರಮಾಣದ ಜಿಎಸ್‌ಟಿಯನ್ನು ಹೇರಲಾಗಿದೆ.

ಜಿಎಸ್‌ಟಿಯ ಒಟ್ಟಾರೆ ಸಂಗ್ರಹವು ಹಲವು ವರ್ಷಗಳಿಂದೀಚೆಗೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ಜೂನ್ 1ರಂದು ಬಿಡುಗಡೆಯಾಗಿದ್ದ ಜಿಎಸ್‌ಟಿ ಸಂಗ್ರಹದ ದತ್ತಾಂಶದ ಪ್ರಕಾರ, ಹಾಲಿ ಹಣಕಾಸು ವರ್ಷದ ಮೊದಲೆರಡು ತಿಂಗಳಲ್ಲಿ ಸಂಗ್ರಹವಾಗಿರುವ ಜಿಎಸ್‌ಟಿಯ ಒಟ್ಟು ಮೊತ್ತ ರೂ. 3.83 ಲಕ್ಷ ಕೋಟಿಯಾಗಿದೆ. "ಪ್ರತಿ ವರ್ಷದ ಬೆಳವಣಿಗೆಯು ಸ್ವದೇಶಿ ವಹಿವಾಟಿನಿಂದ ಪ್ರಬಲ ಏರಿಕೆ ಕಂಡಿದ್ದರೆ (ಶೇ. 11.3), ಆಮದಿನಲ್ಲಿ ಕೊಂಚ ಪ್ರಮಾಣದ ಏರಿಕೆಯಾಗಿರುವುದನ್ನು ಈ ಗಮನಾರ್ಹ ಬೆಳವಣಿಗೆ ಪ್ರತಿನಿಧಿಸುತ್ತದೆ. ಮರುಪಾವತಿಗಾಗಿ ಲೆಕ್ಕ ಹಾಕಿದಾಗ, ಮೇ 2024ರವರೆಗಿನ ನಿವ್ವಳ ಜಿಎಸ್‌ಟಿ ಆದಾಯವು ರೂ. 3.36 ಲಕ್ಷ ಕೋಟಿಯಷ್ಟಾಗಿದೆ. ಈ ಬೆಳವಣಿಗೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಶೇ. 11.6ರಷ್ಟು ಬೆಳವಣಿಗೆಯನ್ನು ಪ್ರತಿಫಲಿಸುತ್ತದೆ" ಎಂದು ಪ್ರಕಟಣೆಯಲ್ಲಿ ಹೇಳಲಾಗಿತ್ತು.

ಇದಕ್ಕೂ ಮುನ್ನ, ವಿವರವಾದ ದತ್ತಾಂಶ ಬಿಡುಗಡೆಯು ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆಯ ಮಾಸಿಕ ಸಂಗ್ರಹ, ರಾಜ್ಯ ಸರಕು ಮತ್ತು ಸೇವೆಗಳ ತೆರಿಗೆಯ ಮಾಸಿಕ ಸಂಗ್ರಹ, ಕ್ರೋಡೀಕೃತ ಸರಕು ಮತ್ತು ಸೇವೆಗಳ ತೆರಿಗೆಯ ಮಾಸಿಕ ಸಂಗ್ರಹ ಹಾಗೂ ಸೆಸ್ ಸಂಗ್ರಹ ದತ್ತಾಂಶದ ವಿಭಜನೆಯನ್ನು ಹೊಂದಿರುತ್ತಿತ್ತು.

ಮೇ ತಿಂಗಳ ವರೆಗೆ ಹಣಕಾಸು ಸಚಿವಾಲಯ ಕೂಡಾ ಅಂತರ ಸರಕಾರಗಳ ಮಾಸಿಕ ಪಾವತಿ ಕುರಿತ ಮುಖ್ಯಾಂಶಗಳನ್ನು ಹಂಚಿಕೊಳ್ಳುತ್ತಿತ್ತು. ಆ ಮೂಲಕ ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಆದಾಯದ ಮೇಲೆ ಬೆಳಕು ಚೆಲ್ಲುತ್ತಿತ್ತು.

ಇದರೊಂದಿಗೆ ರಾಜ್ಯಗಳ ಅಂಕಿ-ಅಂಶಗಳೊಂದಿಗೆ ಒಟ್ಟಾರೆ ಜಿಎಸ್‌ಟಿ ಆದಾಯದ ಪ್ರವೃತ್ತಿ ಹಾಗೂ ಇದಕ್ಕೂ ಮುಂಚಿನ ವರ್ಷದ ಸಂಗ್ರಹದ ಹೋಲಿಕೆ ಇರುವ ಎರಡು ಪಟ್ಟಿಗಳನ್ನೂ ಹಂಚಿಕೊಳ್ಳುತ್ತಿತ್ತು.

ಮಾಸಿಕ ಜಿಎಸ್‌ಟಿ ದತ್ತಾಂಶ ಬಿಡುಗಡೆಯನ್ನು ಸ್ಥಗಿತಗೊಳಿಸುವುದೆಂದರೆ, ಇದೀಗ ರಾಜ್ಯವಾರು ದತ್ತಾಂಶ ವಿಭಜನೆ ಬಿಡುಗಡೆ ಮಾಡಬೇಕೆಂದರೆ, ಅದನ್ನು ಬಹಿರಂಗಗೊಳಿಸಲು ರಾಜ್ಯ ಸರಕಾರಗಳ ಸಹಮತವಿದ್ದರೆ ಮಾತ್ರ ಆಗಲಿದೆ.

ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಕಾಣಿಸಿಕೊಳ್ಳುತ್ತಿರುವ ಜಿಎಸ್‌ಟಿ ಅಂಕಿ-ಸಂಖ್ಯೆ ಕುರಿತು ಕಳವಳ ವ್ಯಕ್ತಪಡಿಸಿ ತೀರಾ ಹೆಚ್ಚಿನ ಅವಧಿಯೇನೂ ಅಗಿಲ್ಲ. ಸರಕಾರದ ಗಮನವು ಆದಾಯಗಳು, ನಿವ್ವಳ ಪಾವತಿಯೆಡೆಗೆ ಇರಬೇಕೇ ಹೊರತು, ಸಂಗ್ರಹದ ಮುಖಪುಟ ಸುದ್ದಿಗಳೆಡೆಗೆ ಅಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಕುರಿತು ಮರು ಪರಿಶೀಲನೆ ನಡೆಯದಿದ್ದರೆ, ಜಿಎಸ್‌ಟಿ ದತ್ತಾಂಶವು ಕೇವಲ ಮಾಸಿಕ ಮತ್ತು ವಾರ್ಷಿಕ ಒಟ್ಟಾರೆ ಜಿಎಸ್‌ಟಿ ಸಂಗ್ರಹದ ಮುಖಪುಟ ಅಂಕಿ-ಸಂಖ್ಯೆಗಳನ್ನು ಹೊಂದಿರುವ ಸಾಧ್ಯತೆ ಇದೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಮಾಸಿಕ ಜಿಎಸ್‌ಟಿ ಪಾವತಿಯ ವಿವರಗಳು ಕೂಡಾ ಕಾಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸೌಜನ್ಯ: businesstoday.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News