ಜೈಲಿನಲ್ಲೇ ಸರಕಾರ ನಡೆಸಲು ಕೇಜ್ರಿವಾಲ್‌ಗೆ ಸೌಲಭ್ಯ | ಪಿಐಎಲ್ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ : ಜೈಲಿನಿಂದಲೇ ಸರಕಾರವನ್ನು ನಡೆಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೂಕ್ತ ಏರ್ಪಾಡುಗಳನ್ನು ಮಾಡಬೇಕೆಂದು ಕೋರಿ ನ್ಯಾಯವಾದಿಯೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ(ಪಿಐಎಲ್)ಯನ್ನು ದಿಲ್ಲಿ ಹೈಕೋರ್ಟ್ ವಜಾಗೊಳಿಸಿದೆ ಹಾಗೂ ಅರ್ಜಿಯು ತಪ್ಪುಗ್ರಹಿಕೆಯಿಂದ ಕೂಡಿದೆ ಹಾಗೂ ಅಪಾರದರ್ಶಕವಾದ ಉದ್ದೇಶ ಹೊಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯವು ಅರ್ಜಿದಾರರಿಗೆ 1 ಲಕ್ಷ ರೂ. ದಂಡವನ್ನು ವಿಧಿಸಿದೆ.
ಕೇಜ್ರಿವಾಲ್ ಅವರ ರಾಜೀನಾಮೆಗಾಗಿ ದಿಲ್ಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚದೇವಾ ಅವರು ಯಾವುದೇ ಅನುಚಿತವಾದ ಒತ್ತಡವನ್ನು ಹೇರುವುದನ್ನು ತಡೆಯಬೇಕೆಂದು ಅರ್ಜಿದಾರರು ಆಗ್ರಹಿಸಿದರು.
ತನ್ನ ಬಂಧನದ ವಿರುದ್ಧ ಆಪ್ ನಾಯಕ ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಲೇರಿರುವುದರಿಂದ, ಅವರಿಗೆ ನ್ಯಾಯಾಂಗ ಕಸ್ಟಡಿಯಲ್ಲಿ ಯಾವುದೇ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಯಾವುದೇ ಆದೇಶವನ್ನು ಹೊರಡಿಸುವುದು ಸೂಕ್ತವಲ್ಲವೆಂದು ಕಾರ್ಯನಿರತ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರು ಅಭಿಪ್ರಾಯಿಸಿದರು.
ಕೇಜ್ರಿವಾಲ್ ವಿರುದ್ಧ ವರದಿಗಳನ್ನು ಪ್ರಕಟಿಸದಂತೆ ಮಾದ್ಯಮಗಳ ಮೇಲೆ ಸೆನ್ಸಾರ್ ಶಿಪ್ ಹೇರಲು ಅಥವಾ ಅವರ ರಾಜಕೀಯ ಎದುರಾಳಿಗಳು ಹೇಳಿಕೆಗಳನ್ನು ನೀಡುವುದನ್ನು ತಡೆಯಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಮನಮೀತ್ ಪಿ.ಎಸ್.ಆರೋರಾ ಅವರನ್ನೊಳಗೊಂಡ ನ್ಯಾಯಪೀಠವು ತಿಳಿಸಿತು. ತಪ್ಪು ಗ್ರಹಿಕೆಯಿಂದ ಕೂಡಿರುವ ಈ ಅರ್ಜಿಯನ್ನು ಅಪಾರದರ್ಶಕ ಉದ್ದೇಶಗಳೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಸಾಲಿಸಿಟರ್
ಜನರಲ್ ಚೇತನ್ ಶರ್ಮಾ ಅವರ ವಾದವನ್ನು ಪುರಸ್ಕರಿಸಿದ ನ್ಯಾಯಪೀಠವು ಅರ್ಜಿದಾರರಿಗೆ 1 ಲಕ್ಷ ರೂ. ದಂಡವನ್ನು ವಿಧಿಸಿತು.
ಅತ್ಯಾಧುನಿಕ ತಂತ್ರಜ್ಞಾನವನ್ನು ಜೈಲಿನಲ್ಲಿದ್ದುಕೊಂಡೇ ಸರಕಾರವನ್ನು ನಡೆಸಲು ಸಾಧ್ಯವಿದೆಯೆಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಪ್ರತಿಪಾದಿಸಿದ ಅರ್ಜಿದಾರರು ಕಾರಾಗೃಹದಿಂದ ಕೇಜ್ರಿವಾಲ್ ಅವರಿಗೆ ವೀಡಿಯೊ ಕಾನ್ಫರೆನ್ಸಿಂಗ್‌ಗೆ ಏರ್ಪಾಡುಗಳನ್ನು ಮಾಡಬೇಕೆಂದು ಕೋರಿದರು. ಕೇಜ್ರಿವಾಲ್ ರಾಜೀನಾಮೆ ಸಾಧ್ಯತೆ ಹಾಗೂ ದಿಲ್ಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಬಗ್ಗೆ ಕೋಲಾಹಲಕಾರಿ ತಲೆಬರಹಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ಆದೇಶ ನೀಡಬೇಕೆಂದು ಅರ್ಜಿದಾರರು ಪಿಐಎಲ್‌ನಲ್ಲಿ ಆಗ್ರಹಿಸಿದ್ದರು.