ರಾಷ್ಟ್ರ ರಾಜಧಾನಿಯಲ್ಲಿ ಹುಸಿ ಬಾಂಬ್ ಬೆದರಿಕೆ: ಅನಗತ್ಯ ಆತಂಕ ಬೇಡ ಎಂದ ಗೃಹ ಸಚಿವಾಲಯ
Update: 2024-05-01 10:35 GMT
ಹೊಸದಿಲ್ಲಿ: ನಗರದ ಮತ್ತು ಅಕ್ಕಪಕ್ಕದ ಪ್ರದೇಶಗಳ ಶಾಲೆಗಳಲ್ಲಿ ಬಾಂಬ್ ಭೀತಿ ಇದೆ ಎಂಬ ಬೆದರಿಕೆ ಸುಳ್ಳು. ಜನತೆ ಆತಂಕಪಡುವ ಅಗತ್ಯ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ಹೇಳಿಕೆ ನೀಡಿದೆ.
ಶಿಷ್ಟಾಚಾರಕ್ಕೆ ಅನುಗುಣವಾಗಿ ಪೊಲೀಸರು ಹಾಗೂ ಭದ್ರತಾ ಏಜೆನ್ಸಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. "ಜನ ಆತಂಕಪಡುವ ಅಗತ್ಯವಿಲ್ಲ. ಈ ಸಂಬಂಧದ ಇಮೇಲ್‍ಗಳು ಹುಸಿ. ದಿಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಶಿಷ್ಟಾಚಾರಕ್ಕೆ ಅನುಗುಣವಾಗಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ರಾಷ್ಟ್ರ ರಾಜಧಾನಿ, ನೆರೆಯ ನೋಯ್ಡಾ ಮತ್ತಿತರ ಪ್ರದೇಶಗಳಲ್ಲಿ ಇಂದು ಮುಂಜಾನೆ 80ಕ್ಕೂ ಹೆಚ್ಚು ಶಾಲೆಗಳು ಬಾಂಬ್ ಬೆದರಿಕೆ ಇ-ಮೇಲ್‍ಗಳನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಕಂಡುಬಂತು. ಈ ಮೇಲ್‍ಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಎಲ್ಲ ಶಾಲೆಗಳಿಂದ ಮಕ್ಕಳನ್ನು ವಾಪಾಸು ಕಳುಹಿಸಲಾಯಿತು.