ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ; ಇಬ್ಬರು ಮೃತ್ಯು, 7 ಮಂದಿಗೆ ಗುಂಡೇಟು
ಗುವಾಹತಿ: ಜನಾಂಗೀಯ ಸಂಘರ್ಷದಿಂದ ಕಂಗೆಟ್ಟಿರುವ ಮಣಿಪುರದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರ ಗುಂಪಿನ ಮೇಲೆ ಅಪರಿಚಿತ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟು, ಇತರ ಏಳು ಮಂದಿ ಗಾಯಗೊಂಡಿದ್ದಾರೆ.
ಮಣಿಪುರದ ಬಿಷ್ಣುಪುರ- ಚುರಚಂದಾಪುರ ಗಡಿ ಭಾಗದ ನರನ್‍ಸೇನಿಯಾ ಎಂಬಲ್ಲಿ ಈ ಘಟನೆ ನಡೆದಿದ್ದು, ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಸ್ಥಿತಿ ಮತ್ತೆ ಹಿಂಸಾತ್ಮಕ ರೂಪ ಪಡೆದಿದೆ.
ಮೃತಪಟ್ಟವರನ್ನು ಲೈಬುಜಾಮ್ ಇನಾವೊ ಹಾಗೂ ಜಂಗ್‍ಮಿನ್‍ಲೆನ್ ಗಾಂಗ್ಟೆ ಎಂದು ಗುರುತಿಸಲಾಗಿದ್ದು, ಒಬ್ಬರು ನರನ್‍ಸೇನಿಯಾ ಮನಿಂಗ್ ಲೌಬುಕ್‍ನಲ್ಲಿ ನಡೆದ ಕಾಳಗದಲ್ಲಿ ಆದ ತೀವ್ರ ಗುಂಡೇಟಿನಿಂದ ಇಂಫಾಲ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಮತ್ತೊಬ್ಬರು ಚುರಚಂದನ್‍ಪುರ ಜಿಲ್ಲೆಯ ಸೊಂಗ್ಡೊ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ ಆದ ಗಾಯದಿಂದ ಕೊನೆಯುಸಿರೆಳೆದಿದ್ದಾರೆ.
ನರಸೇನಿಯಾ ಗ್ರಾಮದಲ್ಲಿ ನಡೆದ ರೈತರ ಮೇಲಿನ ದಾಳಿಯಲ್ಲಿ ಇತರ ಇಬ್ಬರಿಗೆ ಗಾಯಗಳಾಗಿವೆ. ಬಿಷ್ಣುಪುರದ ಮತ್ತೊಂದು ಕಡೆ ಕೂಡಾ ಗುಂಡಿನ ದಾಳಿ ನಡೆದಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ತಮ್ಮನ್ನು ದಾಳಿಕೋರರು ಗುರಿಮಾಡಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಲೌಮಿ ಶಿನ್ಮಿ ಅಪೂನ್ ಲೂಪ್ ಎಂಬ ಐದು ರೈತ ಸಂಘಟನೆಗಳ ಒಕ್ಕೂಟ ಆಪಾದಿಸಿದೆ. ಭತ್ತದ ಗದ್ದೆಗಳ ಬಹುತೇಕ ಪ್ರದೇಶ ಇನ್ನೂ ಅಸುರಕ್ಷಿತವಾಗಿದ್ದರೂ, ಮೂರು ತಿಂಗಳ ಹಿಂಸಾಚಾರದಿಂದ ಕಂಗೆಟ್ಟಿರುವ ರೈತರು ಹೊಲಗಳಿಗೆ ಹೋಗುವುದು ಅನಿವಾರ್ಯ ಎಂದು ಅಧ್ಯಕ್ಷ ಮುಟೂಮ್ ಚುರಾಮಣಿ ಹೇಳಿದ್ದಾರೆ.
ಮಂಗಳವಾರ ನಡೆದ ಹಿಂಸಾಚಾರದ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.