ಬಡ ರಾಷ್ಟ್ರಗಳಲ್ಲಿ ಕಡಿಮೆ ದರ್ಜೆಯ ಉತ್ಪನ್ನಗಳನ್ನು ಮಾರಾಟ ಮಾಡುವ ಆಹಾರ ಪದಾರ್ಥ ಕಂಪೆನಿಗಳು : ವರದಿ

Update: 2024-11-07 14:56 GMT

ಸಾಂದರ್ಭಿಕ ಚಿತ್ರ | PC : freepik.com

ಲಂಡನ್: ನೂತನ ವರದಿಯೊಂದರ ಪ್ರಕಾರ, ಹೆಚ್ಚು ಆದಾಯ ಹೊಂದಿರುವ ರಾಷ್ಟ್ರಗಳಿಗೆ ಹೋಲಿಸಿದರೆ, ಕಡಿಮೆ ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ಕಡಿಮೆ ದರ್ಜೆಯ ಉತ್ಪನ್ನಗಳನ್ನು ವಿಶ್ವದ ಬೃಹತ್ ಆಹಾರ ಮತ್ತು ಪಾನೀಯ ಕಂಪೆನಿಗಳು ಮಾರಾಟ ಮಾಡುತ್ತಿವೆ ಎಂದು ಹೇಳಲಾಗಿದೆ.

2021ರಿಂದ ಇದೇ ಪ್ರಥಮ ಬಾರಿಗೆ ಜಾಗತಿಕ ಸೂಚ್ಯಂಕದ ಭಾಗವಾಗಿ ಪ್ರಕಟಿಸಲಾಗಿರುವ Access to Nutritional Initiative ಸಂಸ್ಥೆಯ ವರದಿಯಲ್ಲಿ ನೆಸ್ಲೆ, ಪೆಪ್ಸಿಕೊ ಹಾಗೂ ಯೂನಿಲೀವರ್ ಸಂಸ್ಥೆಗಳು ಮಾರಾಟ ಮಾಡುವ ಉತ್ಪನ್ನಗಳನ್ನು ಉಲ್ಲೇಖಿಸಲಾಗಿದೆ.

ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ನಲ್ಲಿ ಅಭಿವೃದ್ಧಿಪಡಿಸಲಾಗಿರುವ ರೇಟಿಂಗ್ ವ್ಯವಸ್ಥೆಯ ಪ್ರಕಾರ, ಹೆಚ್ಚು ಅದಾಯ ಹೊಂದಿರುವ ರಾಷ್ಟ್ರಗಳಿಗೆ ಹೋಲಿಸಿದರೆ, ಕಡಿಮೆ ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ವಿಶ್ವದ 30 ಕಂಪೆನಿಗಳು ಮಾರಾಟ ಮಾಡುವ ಉತ್ಪನ್ನಗಳು ಕಡಿಮೆ ರೇಟಿಂಗ್ ಹೊಂದಿರುವುದನ್ನು ಈ ಲಾಭರಹಿತ ಸರಕಾರೇತರ ಸಂಸ್ಥೆಯು ಪತ್ತೆ ಹಚ್ಚಿದೆ.

ಈ ರೇಟಿಂಗ್ ವ್ಯವಸ್ಥೆಯಲ್ಲಿ ತಮ್ಮ ಆರೋಗ್ಯಕರ ಗುಣಮಟ್ಟಕ್ಕಾಗಿ ಆಹಾರ ಉತ್ಪನ್ನಗಳಿಗೆ 5 ರವರೆಗೆ ರೇಟಿಂಗ್ ನಿಗದಿಪಡಿಸಲಾಗಿದ್ದು, 5 ನ್ನು ಅತ್ಯುತ್ತಮ ಹಾಗೂ 3.5ರ ಮೇಲಿನ ರೇಟಿಂಗ್ ಗೆ ಆರೋಗ್ಯಕರ ಆಯ್ಕೆ ಎಂದು ಪರಿಗಣಿಸಲಾಗಿದೆ.

ಕಡಿಮೆ ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು 1.8 ರೇಟಿಂಗ್ ಹೊಂದಿದ್ದರೆ, ಹೆಚ್ಚು ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ 2.3 ರೇಟಿಂಗ್ ಹೊಂದಿವೆ.

ಈ ಕುರಿತು Reuters ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ Access to Nutritional Initiative ಸಂಸ್ಥೆಯ ಸಂಶೋಧನಾ ನಿರ್ದೇಶಕ ಮಾರ್ಕ್ ವಿಜ್ನೆ, “ವಿಶ್ವದ ಬಡ ರಾಷ್ಟ್ರಗಳಲ್ಲಿ ಹೆಚ್ಚೆಚ್ಚು ಕ್ರಿಯಾಶೀಲವಾಗಿರುವ ಈ ಕಂಪೆನಿಗಳು ಮಾರಾಟ ಮಾಡುತ್ತಿರುವ ಉತ್ಪನ್ನಗಳು ಆರೋಗ್ಯಕರವಲ್ಲ, ಕಡಿಮೆ ದರ್ಜೆಯವು ಎಂಬುದು ಅತ್ಯಂತ ಸ್ಪಷ್ಟ” ಎಂದು ಹೇಳಿದ್ದಾರೆ.

“ಈ ದೇಶಗಳಲ್ಲಿನ ಸರಕಾರಗಳು ಎಚ್ಚೆತ್ತುಕೊಳ್ಳಲು ಇದು ಎಚ್ಚರಿಕೆಯ ಗಂಟೆಯಾಗಿದೆ” ಎಂದೂ ಅವರು ಹೇಳಿದ್ದಾರೆ.

ಇದೇ ಪ್ರಥಮ ಬಾರಿಗೆ ಈ ಸೂಚ್ಯಂಕವು ಕಡಿಮೆ ಆದಾಯ ಹಾಗೂ ಹೆಚ್ಚು ಆದಾಯ ಹೊಂದಿರುವ ರಾಷ್ಟ್ರಗಳು ಎಂದು ವರ್ಗೀಕರಣಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News