ಕೇರಳ ಸ್ಫೋಟ ಪ್ರಕರಣ: ಮೃತರ ಸಂಖ್ಯೆ 3ಕ್ಕೆ ಏರಿಕೆ

Update: 2023-10-30 06:20 GMT

Photo: PTI

ಹೊಸದಿಲ್ಲಿ: ಕೇರಳದ ಕಲಮಸ್ಸೇರಿಯ ಕ್ರೈಸ್ತ ಪ್ರಾರ್ಥನಾ ಸಮಾವೇಶ ನಡೆಯುತ್ತಿದ್ದ ಸಭಾಂಗಣದಲ್ಲಿ ರವಿವಾರ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಇಂದು ಮೂರಕ್ಕೇರಿದೆ.

ರವಿವಾರ ನಡೆದ ಈ ಘಟನೆಯಲ್ಲಿ ಗಾಯಾಳುಗಳಾಗಿದ್ದ 50ಕ್ಕೂ ಅಧಿಕ ಮಂದಿಯಲ್ಲಿ ಒಬ್ಬಳಾಗಿದ್ದ 12 ವರ್ಷದ ಬಾಲಕಿಯೊಬ್ಬಳು ಇಂದು ಕಲಮಸ್ಸೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಬಾಲಕಿಗೆ ಶೇ 95ರಷ್ಟು ಸುಟ್ಟ ಗಾಯಗಳಾಗಿದ್ದರಿಂದ ಆಕೆಯನ್ನು ವೆಂಟಿಲೇಟರಿನಲ್ಲಿರಿಸಲಾಗಿತ್ತು. ಮೃತ ಇತರ ಇಬ್ಬರು ಮಹಿಳೆಯರಾಗಿದ್ದಾರೆ.

ಜೆಹೋವಾಸ್‌ ವಿಟ್ನೆಸ್‌ ಎಂಬ ಕ್ರೈಸ್ತ ಗುಂಪಿನ ಅನುಯಾಯಿಗಳ ಮೂರು ದಿನಗಳ ಪ್ರಾರ್ಥನಾ ಸಭೆಯ ಕೊನೆಯ ದಿನ ಈ ಸ್ಫೋಟ ಸಂಭವಿಸಿದೆ.

ಈ ಸ್ಫೋಟಕ್ಕೆ ಐಇಡಿ ಬಳಸಲಾಗಿದ್ದು ಅದನ್ನು ಟಿಫಿನ್‌ ಬಾಕ್ಸಿನಲ್ಲಿರಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದಾಗ ಸುಮಾರು 2000 ಮಂದಿ ಸಭಾಂಗಣದಲ್ಲಿದ್ದರು.

ಎನ್‌ಐಎ ಈ ಪ್ರಕರಣದ ತನಿಖೆ ನಡೆಸಲಿದ್ದು ಫೊರೆನ್ಸಿಕ್‌ ತಂಡ ರವಿವಾರ ಸ್ಥಳಕ್ಕೆ ಭೇಟಿ ನೀಡಿದೆ.

ಈ ಸ್ಪೋಟಕ್ಕೆ ನಾನೇ ಕಾರಣ ಎಂದು ಡೊಮಿನಿಕ್ ಮಾರ್ಟಿನ್ ಎಂಬಾತ ಫೇಸ್ ಬುಕ್ ಲೈವ್ ನಲ್ಲಿ ವೀಡಿಯೊ ಮೂಲಕ ಹೇಳಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಪೊಲೀಸರು ಈಗಾಗಲೇ ಹೆಸರಿಸದ ವ್ಯಕ್ತಿಗಳ ವಿರುದ್ಧ ಸೆಕ್ಷನ್‌ 302 ಮತ್ತು 307 ಅನ್ವಯ ಹಾಗೂ ಸ್ಫೋಟಕಗಳ ಕಾಯಿದೆ ಮತ್ತು ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News