ನ್ಯಾಯಾಂಗದ ಸ್ವಾತಂತ್ರ್ಯವೆಂದರೆ ಯಾವಾಗಲೂ ಸರಕಾರದ ವಿರುದ್ಧ ತೀರ್ಪುಗಳನ್ನು ನೀಡುವುದು ಎಂದರ್ಥವಲ್ಲ : ಸಿಜೆಐ
ಹೊಸದಿಲ್ಲಿ : ನ್ಯಾಯಾಂಗದ ಸ್ವಾತಂತ್ರ್ಯವೆಂದರೆ ಯಾವಾಗಲೂ ಸರಕಾರದ ವಿರುದ್ಧ ತೀರ್ಪುಗಳನ್ನು ನೀಡುವುದು ಎಂದರ್ಥವಲ್ಲ ಎಂದು ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್(ಸಿಜೆಐ) ಹೇಳಿದ್ದಾರೆ.
ಮಾಧ್ಯಮ ಸಮೂಹವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಾಂಪ್ರದಾಯಿಕವಾಗಿ ನ್ಯಾಯಾಂಗ ಸ್ವಾತಂತ್ರ್ಯವನ್ನು ಕಾರ್ಯಾಂಗದಿಂದ ಸ್ವತಂತ್ರವಾಗಿರುವುದು ಎಂದು ವ್ಯಾಖ್ಯಾನಿಸಲಾಗಿದೆ. ನ್ಯಾಯಾಂಗ ಸ್ವಾತಂತ್ರ್ಯವು ಈಗಲೂ ಸರಕಾರದಿಂದ ಸ್ವತಂತ್ರ ಎಂಬ ಅರ್ಥವನ್ನು ನೀಡುತ್ತದೆ. ಆದರೆ ನ್ಯಾಯಾಂಗದ ಸ್ವಾತಂತ್ರ್ಯ ಕುರಿತಂತೆ ಅದೊಂದೇ ವಿಷಯವಲ್ಲ. ನಮ್ಮ ಸಮಾಜವು ಬದಲಾಗಿದೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ಆಗಮನದೊಂದಿಗೆ ವಿದ್ಯುನ್ಮಾನ ಮಾಧ್ಯಮಗಳನ್ನು ಬಳಸಿಕೊಂಡು ನ್ಯಾಯಾಲಯಗಳ ಮೇಲೆ ಒತ್ತಡ ಹೇರುವ ಮೂಲಕ ತಮಗೆ ಅನುಕೂಲಕರ ತೀರ್ಪುಗಳನ್ನು ಪಡೆದುಕೊಳ್ಳಲು ಯತ್ನಿಸುವ ಹಿತಾಸಕ್ತಿ ಗುಂಪುಗಳು,ಒತ್ತಡ ಗುಂಪುಗಳನ್ನು ನೀವು ನೋಡುತ್ತಿದ್ದೀರಿ’ ಎಂದು ಹೇಳಿದರು.
‘‘ಇಂತಹ ಬಹಳಷ್ಟು ಗುಂಪುಗಳು ನ್ಯಾಯಾಧೀಶರು ತಮ್ಮ ಪರವಾಗಿ ತೀರ್ಪು ನೀಡಿದರೆ ನ್ಯಾಯಾಂಗವನ್ನು ಸ್ವತಂತ್ರ ಎಂದು ಬಣ್ಣಿಸುತ್ತವೆ. ‘ಆದರೆ ನೀವು ನನ್ನ ಪರವಾಗಿ ತೀರ್ಪು ನೀಡದಿದ್ದರೆ ನೀವು ಸ್ವತಂತ್ರರಲ್ಲ’ ಇದಕ್ಕೆ ನನ್ನ ಆಕ್ಷೇಪವಿದೆ. ನ್ಯಾಯಾಧೀಶರು ಸ್ವತಂತ್ರರಾಗಿರಲು ಕಾನೂನು ಮತ್ತು ಸಂವಿಧಾನದಿಂದ ನಿರ್ದೇಶಿತವಾಗಿರುವ ತಮ್ಮ ಆತ್ಮಸಾಕ್ಷಿಯು ತಮಗೆ ಏನನ್ನು ಹೇಳುತ್ತಿದೆ ಎನ್ನುವುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಹೊಂದಿರಬೇಕು’’ ಎಂದು ನ.10ರಂದು ನಿವೃತ್ತರಾಗಲಿರುವ ನ್ಯಾ.ಚಂದ್ರಚೂಡ್ ಹೇಳಿದರು.
ತಾನು ಸರಕಾರದ ವಿರುದ್ಧ ತೀರ್ಪು ನೀಡಿದಾಗ ಮತ್ತು ಚುನಾವಣಾ ಬಾಂಡ್ಗಳನ್ನು ರದ್ದುಗೊಳಿಸಿದಾಗ ತನ್ನನ್ನು ಸ್ವತಂತ್ರ ನ್ಯಾಯಾಧೀಶ ಎಂದು ಕರೆಯಲಾಗಿತ್ತು ಎಂದು ಹೇಳಿದ ಅವರು,‘ನೀವು ಚುನಾವಣಾ ಬಾಂಡ್ಗಳ ಕುರಿತು ನಿರ್ಧರಿಸಿದಾಗ ನೀವು ಅತ್ಯಂತ ಸ್ವತಂತ್ರರು,ಆದರೆ ಸರಕಾರದ ಪರವಾಗಿ ತೀರ್ಪು ನೀಡಿದಾಗ ನೀವು ಸ್ವತಂತ್ರರಲ್ಲ. ಇದು ಸ್ವಾತಂತ್ರ್ಯದ ನನ್ನ ವ್ಯಾಖ್ಯಾನವಲ್ಲ’ ಎಂದರು.
ಪ್ರಕರಣಗಳನ್ನು ತೀರ್ಮಾನಿಸುವ ಅವಕಾಶವನ್ನು ನ್ಯಾಯಾಧೀಶರಿಗೇ ನೀಡಬೇಕು ಎಂದೂ ನ್ಯಾ.ಚಂದ್ರಚೂಡ್ ಹೇಳಿದರು.