ಏರ್‌ಟೆಲ್, ಜಿಯೊ ಮತ್ತು ವೊಡಾಫೋನ್ ಮೊಬೈಲ್ ಶುಲ್ಕಗಳ ಹೆಚ್ಚಳ ಕುರಿತು ಸ್ಪಷ್ಟನೆ ನೀಡಿದ ಸರಕಾರ
ಹೊಸದಿಲ್ಲಿ: ಯಾವುದೇ ನಿಯಂತ್ರಣವಿಲ್ಲದೆ ರಿಲಯನ್ಸ್ ಜಿಯೊ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಏಕಪಕ್ಷೀಯವಾಗಿ ದರಗಳನ್ನು ಹೆಚ್ಚಿಸಲು ತಾನು ಅನುಮತಿ ನೀಡಿದ್ದೇನೆ ಎಂಬ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ಸರಕಾರವು ತಿರಸ್ಕರಿಸಿದೆ. ಈ ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಡ್ ಮತ್ತು ಪೋಸ್ಟ್‌ಪೇಡ್ ಯೋಜನೆಗಳ ದರಗಳನ್ನು ಹೆಚ್ಚಿಸಿದ್ದು, ಇದು 2023, ಜು.3ರಿಂದಲೇ ಜಾರಿಗೊಂಡಿದೆ.
ಖಾಸಗಿ ವಲಯದ ಮೂರು ಮತ್ತು ಸಾರ್ವಜನಿಕ ವಲಯದ ಒಂದು ಕಂಪನಿಗಳೊಂದಿಗೆ ಪ್ರಸ್ತುತ ಮೊಬೈಲ್ ಸೇವೆಗಳ ಮಾರುಕಟ್ಟೆಯು ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಕಾರ್ಯಾಚರಿಸುತ್ತಿದೆ. ದೂರಸಂಪರ್ಕ ಸೇವೆಗಳ ದರಗಳು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು ಅಧಿಸೂಚಿಸಿರುವ ನಿಯಂತ್ರಕ ಚೌಕಟ್ಟಿನೊಳಗೆ ಮಾರುಕಟ್ಟೆಗೆ ಅನುಗುಣವಾಗಿ ನಿರ್ಧರಿಸಲ್ಪಡುತ್ತವೆ ಎಂದು ಟ್ರಾಯ್ ಅಧಿಕೃತ ಹೇಳಿಕೆಯಲ್ಲಿ ಸ್ವಷ್ಟಪಡಿಸಿದೆ.
ನಿಯಂತ್ರಣ ಅಧಿಕಾರವು ಟ್ರಾಯ್ ಅಧೀನದಲ್ಲಿರುವುದರಿಂದ ಮುಕ್ತ ಮಾರುಕಟ್ಟೆ ನಿರ್ಧಾರಗಳಲ್ಲಿ ಸರಕಾರವು ಮಧ್ಯ ಪ್ರವೇಶಿಸುವುದಿಲ್ಲ. ಮೊಬೈಲ್ ಸೇವೆಗಳ ದರಗಳಲ್ಲಿ ಯಾವುದೇ ಬದಲಾವಣೆಯನ್ನು ದೂರಸಂಪರ್ಕ ಕಂಪನಿಗಳು ಟ್ರಾಯ್‌ಗೆ ತಿಳಿಸುತ್ತವೆ ಮತ್ತು ಇಂತಹ ಬದಲಾವಣೆಗಳು ನಿಗದಿತ ನಿಯಂತ್ರಕ ಚೌಕಟ್ಟಿನೊಳಗೆ ಇವೆಯೇ ಎನ್ನುವ ಬಗ್ಗೆ ಟ್ರಾಯ್ ಮೇಲ್ವಿಚಾರಣೆ ನಡೆಸುತ್ತದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಟೆಲಿಕಾಂ ಕಂಪನಿಗಳು ಎರಡು ವರ್ಷಕ್ಕೂ ಅಧಿಕ ಸಮಯದ ಬಳಿಕ ಮೊಬೈಲ್ ಸೇವೆಗಳ ದರವನ್ನು ಹೆಚ್ಚಿಸಿವೆ ಎಂದು ಎತ್ತಿ ತೋರಿಸಿರುವ ಅಧಿಕೃತ ಹೇಳಿಕೆಯು,ಕಳೆದ ಎರಡು ವರ್ಷಗಳಲ್ಲಿ ಕೆಲವು ಟೆಲಿಕಾಂ ಕಂಪನಿಗಳು ದೇಶಾದ್ಯಂತ 5ಜಿ ಸೇವೆಗಳನ್ನು ಆರಂಭಿಸಲು ಭಾರೀ ಹೂಡಿಕೆಯನ್ನು ಮಾಡಿವೆ. ಪರಿಣಾಮವಾಗಿ ಸರಾಸರಿ ಮೊಬೈಲ್ ವೇಗವು 100 ಎಂಬಿಪಿಸ್ ಮಟ್ಟಕ್ಕೆ ಗಣನೀಯವಾಗಿ ಹೆಚ್ಚಿದೆ ಮತ್ತು ಭಾರತದ ಅಂತರರಾಷ್ಟ್ರೀಯ ರ್ಯಾಂಕ್ 2022 ಅಕ್ಟೋಬರ್‌ನಲ್ಲಿ ಇದ್ದ 111ರಿಂದ ಇಂದು 15ಕ್ಕೆ ಜಿಗಿದಿದೆ. ಚಂದಾದಾರರ ಹಿತಾಸಕ್ತಿಗಳನ್ನು ರಕ್ಷಿಸುವಾಗ 5ಜಿ,6ಜಿ,ಐಒಟಿ/ಎಂ2ಎಂ ಇತ್ಯಾದಿಗಳಂತಹ ಇತ್ತೀಚಿನ ತಂತ್ರಜ್ಞಾನದಲ್ಲಿ ಹೂಡಿಕೆಗಳು ಸೇರಿದಂತೆ ದೂರಸಂಪರ್ಕ ಕ್ಷೇತ್ರದ ಕ್ರಮಬದ್ಧ ಬೆಳವಣಿಗೆಗಾಗಿ ಅದರ ಆರ್ಥಿಕ ಕಾರ್ಯಸಾಧ್ಯತೆಯೂ ಮುಖ್ಯವಾಗಿದೆ ಎಂದು ತಿಳಿಸಿದೆ.