ವ್ಯಾಪಕ ಟೀಕೆ ಎದುರಿಸಿದ್ದ ಪ್ರಸಾರ ಮಸೂದೆಯನ್ನು ವಾಪಸ್‌ ಪಡೆದ ಮೋದಿ ಸರಕಾರ: ವರದಿ

Update: 2024-08-13 05:26 GMT

ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: ವ್ಯಾಪಕ ಟೀಕೆ ಹಾಗೂ ವಿವಾದಕ್ಕೆ ಗುರಿಯಾಗಿದ್ದ ಹೊಸ ಕರಡು ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ, 2024 ಅನ್ನು ಕೇಂದ್ರ ವಾರ್ತಾ ಮರ್ತು ಪ್ರಸಾರ ಸಚಿವಾಲಯ ವಾಪಸ್‌ ಪಡೆದಿದೆ ಎಂದು ತಿಳಿದು ಬಂದಿದೆ. ಸರ್ಕಾರ ಈ ಪ್ರಸ್ತಾವಿತ ಮಸೂದೆ ಮೂಲಕ ಆನ್‌ಲೈನ್‌ ಮಾಧ್ಯಮದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸುವ ಗುರಿ ಹೊಂದಿದೆ ಎಂದು ಆರೋಪಿಸಲಾಗಿತ್ತು.

ಈ ಕರಡು ಮಸೂದೆಯು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅದನ್ನು ನಿಯಂತ್ರಿಸುವ ಸರ್ಕಾರದ ಅಧಿಕಾರಗಳ ಕುರಿತು ಹಲವು ಪ್ರಶ್ನೆಗಳನ್ನೆತ್ತಿತ್ತು.

ಕಳೆದ ತಿಂಗಳು ಸಚಿವಾಲಯವು ಈ ಕರಡು ಮಸೂದೆಯನ್ನು ಆಯ್ದ ಕೆಲ ಸಂಬಂಧಿತರೊಂದಿಗೆ ಹಂಚಿಕೊಂಡು ಅವರ ಪ್ರತಿಕ್ರಿಯೆಗಳನ್ನು ಕೋರಿತ್ತು. ಆದರೆ ತಾನು ಮಸೂದೆಯ ಕರಡು ನೀಡಿದವರಿಗೆ ಅದನ್ನು ವಾಪಸ್‌ ನೀಡುವಂತೆ ಸಚಿವಾಲಯ ಹೇಳಿದೆ ಎಂದು ಮೂಲಗಳು ತಿಳಿಸಿವೆ. ತಮಗೆ ನೀಡಲಾದ ಕರಡು ಮಸೂದೆಯ ಪ್ರತಿಗಳನ್ನು ವಾಪಸ್‌ ನೀಡಲು ಅವರಿಗೆ ಸಚಿವಾಲಯದಿಂದ ಕರೆ ಬಂದಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮತ್ತೆ ಹೊಸ ಪ್ರಸ್ತಾವನೆಯನ್ನು ಸಚಿವಾಲಯ ಸಿದ್ಧಪಡಿಸಬಹುದೆಂದು ನಿರೀಕ್ಷಿಸಲಾಗಿದ್ದು ಇಲ್ಲಿಯವರೆಗೆ ಅಧಿಕೃತವಾಗಿ ಯಾವುದೇ ಹೇಳಿಕೆ ಬಂದಿಲ್ಲ.

ಆದರೆ ಸೋಮವಾರ ರಾತ್ರಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಸಚಿವಾಲಯ ಕಳೆದ ವರ್ಷದ ನವೆಂಬರ್‌ ತಿಂಗಳಿನಲ್ಲಿ ಮುಂದಿಡಲಾಗಿದ್ದ ಹಿಂದಿನ ಕರಡು ಮಸೂದೆಯನ್ನು ಉಲ್ಲೇಖಿಸಿ, ಸಂಬಂಧಿತರೊಂದಿಗೆ ಚರ್ಚೆ ನಡೆಸಲಾಗುತ್ತಿದೆ, ಪ್ರತಿಕ್ರಿಯೆ ಸಲ್ಲಿಸಲು ಅಕ್ಟೋಬರ್‌ 15ರ ತನಕ ಹೆಚ್ಚುವರಿ ಸಮಯಾವಕಾಶ ನೀಡಲಾಗುತ್ತಿದೆ, ಚರ್ಚೆಗಳ ನಂತರ ಹೊಸ ಕರಡು ಪ್ರಕಟಿಸಲಾಗುವುದು,” ಎಂದು ಹೇಳಿದೆ.

ಆದರೆ ಈ ಹೇಳಿಕೆಯಲ್ಲಿ ಕಳೆದ ತಿಂಗಳು ಕೆಲವರೊಂದಿಗೆ ಹಂಚಿಕೊಳ್ಳಲಾದ ಹೊಸ ಕರಡು ಮಸೂದೆ ಕುರಿತು ಉಲ್ಲೇಖಿಸಲಾಗಿಲ್ಲ.

ಕರಡು ಮಸೂದೆಯು ಸುದ್ದಿಯೇತರ ಆನ್‌ಲೈನ್‌ ಕಂಟೆಂಟ್‌ ಕ್ರಿಯೇಟರ್‌ಗಳಿಗೂ ಅನ್ವಯಿಸಬೇಕೇ ಎಂಬ ಕುರಿತು ಅಧಿಕಾರಿಗಳಲ್ಲಿ ಭಿನ್ನಾಭಿಪ್ರಾಯವಿತ್ತೆಂದು ಮೂಲಗಳಿಂದ ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News