"ಡ್ರಗ್ಸ್ ಕುರಿತು ಹಾಡಬೇಡಿ": ಹೈದರಾಬಾದ್ ಸಂಗೀತ ಕಾರ್ಯಕ್ರಮಕ್ಕೂ ಮೊದಲು ಗಾಯಕ ದಿಲ್ಜಿತ್ ದೊಸಾಂಜ್ ಗೆ ನೋಟಿಸ್
ಹೈದರಾಬಾದ್: ಇಂದು ಹೈದರಾಬಾದ್ ನಲ್ಲಿ ನಡೆಯಲಿರುವ ಖ್ಯಾತ ಪಂಜಾಬಿ ನಟ-ಗಾಯಕ ದಿಲ್ಜಿತ್ ದೊಸಾಂಜ್ ಸಂಗೀತ ಕಾರ್ಯಕ್ರಮ Dil-Luminatiಗೂ ಮುನ್ನ ತೆಲಂಗಾಣ ಸರಕಾರವು ಅವರಿಗೆ ನೋಟಿಸ್ ಜಾರಿಗೊಳಿಸಿದೆ. ತಮ್ಮ ಹಿಂದಿನ ಸಂಗೀತ ಕಚೇರಿಗಳಲ್ಲಿದ್ದಂತೆ ಮದ್ಯ, ಮಾದಕ ದ್ರವ್ಯ ಅಥವಾ ಹಿಂಸೆಯನ್ನು ಉತ್ತೇಜಿಸುವ ಯಾವುದೇ ಗೀತೆಗಳನ್ನು ಹಾಡುವುದನ್ನು ನಿಯಂತ್ರಿಸಬೇಕು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.
ಚಂಡೀಗಢದ ಪಂಡಿತ್ ರಾವ್ ಧಾರೆನವರ್ ಎಂಬವರು ಇತ್ತೀಚೆಗೆ ದಿಲ್ಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣ ಹಾಗೂ ಜೈಪುರದಲ್ಲಿ ನಡೆದಿದ್ದ ಸಂಗೀತ ಕಚೇರಿ ಸೇರಿದಂತೆ ತಮ್ಮ ಈ ಹಿಂದಿನ ಹಲವಾರು ಸಂಗೀತ ಕಚೇರಿಗಳಲ್ಲಿ ದಿಲ್ಜಿತ್ ದೊಸಾಂಜ್ ಇಂತಹ ಉದ್ರೇಕಕಾರಿ ಗೀತೆಗಳನ್ನು ಹಾಡಿದ್ದಾರೆಂದು ಆರೋಪಿಸಿ ವಿಡಿಯೊ ಸಾಕ್ಷ್ಯವನ್ನು ಒದಗಿಸಿದ ನಂತರ, ಈ ನಿರ್ದೇಶನ ಹೊರ ಬಿದ್ದಿದೆ.
ಹೈದರಾಬಾದ್ ನಲ್ಲಿ ನಡೆಯಲಿರುವ ಪಂಜಾಬಿ ನಟ-ಗಾಯಕ ದಿಲ್ಜಿತ್ ದೊಸಾಂಜ್ ರ ಸಂಗೀತ ಕಾರ್ಯಕ್ರಮಕ್ಕೆ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಈಗಾಗಲೇ ಈ ಕಾರ್ಯಕ್ರಮದ ಬಹುತೇಕ ಟಿಕೆಟ್ ಗಳು ಮಾರಾಟವಾಗಿ ಹೋಗಿವೆ. ಅಕ್ಟೋಬರ್ 26ರಂದು ದಿಲ್ಜಿತ್ ದೊಸಾಂಜ್ ಹೊಸ ದಿಲ್ಲಿಯಿಂದ ತಮ್ಮ ದಿಲ್-ಲುಮಿನತಿ ಸಂಗೀತ ಕಚೇರಿ ಪ್ರವಾಸವನ್ನು 11 ನಗರಗಳಿಗೆ ಪ್ರಾರಂಭಿಸಿದ್ದರು.