ದಿಲ್ಲಿಯಲ್ಲಿ ಮತ್ತಷ್ಟು ಕುಸಿದ ವಾಯುಗುಣಮಟ್ಟ: ನಿರ್ಮಾಣ ಕಾಮಗಾರಿ, ಟ್ರಕ್ ಗಳಿಗೆ ನಿರ್ಬಂಧ

Update: 2024-11-18 06:49 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. ಕಲುಷಿತ ಹೊಗೆಯು ಸೋಮವಾರ ದಟ್ಟವಾಗಿ ಆವರಿಸಿದ್ದು, ಗಾಳಿಯ ಗುಣಮಟ್ಟ ಕನಿಷ್ಠ ಮಟ್ಟ ಎಂದರೆ ಎಕ್ಯೂಐ ಸೂಚ್ಯಂಕ 481ಕ್ಕೆ ಕುಸಿದಿದೆ.

ಗಾಳಿ ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್(GRAP) ಹಂತ IVರ ಅಡಿಯಲ್ಲಿ ಕಠಿಣವಾದ ಮಾಲಿನ್ಯ ವಿರೋಧಿ ಕ್ರಮಗಳನ್ನು ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್(CAQM) ಆಯೋಗವು ತೆಗೆದುಕೊಂಡಿದೆ.

ದಿಲ್ಲಿಗೆ ಅಗತ್ಯ ಸರಕುಗಳನ್ನು ಸಾಗಿಸುವ ಟ್ರಕ್ ಮತ್ತು ಸಿಎನ್ಜಿಯಂತಹ ಶುದ್ಧ ಇಂಧನಗಳನ್ನು ಹೊತ್ತ ಟ್ರಕ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಟ್ರಕ್ ಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹೆದ್ದಾರಿಗಳು, ರಸ್ತೆಗಳು, ಮೇಲ್ಸೇತುವೆಗಳು, ಪೈಪ್ಲೈನ್, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಕಾಮಗಾರಿಯನ್ನು ನಿಷೇಧಿಸಲಾಗಿದೆ. ಇದಲ್ಲದೆ ದಿಲ್ಲಿ ಸರ್ಕಾರ ಮಕ್ಕಳಿಗೆ ಶಾಲೆಗೆ ಹಾಜರಾಗುವ ಬದಲು ಆನ್ ಲೈನ್ ನಲ್ಲಿ ತರಗತಿಗಳನ್ನು ಆರಂಭಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ದಿಲ್ಲಿ ನಿವಾಸಿಗಳು ತೀವ್ರ ವಾಯು ಮಾಲಿನ್ಯದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ಕಣ್ಣುಗಳಲ್ಲಿ ಕಿರಿಕಿರಿಯನ್ನು ಅನುಭವಿಸಿದ್ದಾರೆ ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸಿದ್ದಾರೆ. ವಾಯು ಮಾಲಿನ್ಯ ಕಣ್ಣುಗಳಲ್ಲಿ ಉರಿ, ಉಸಿರಾಟದ ತೊಂದರೆ, ಕೆಮ್ಮು ಮತ್ತು ಶೀತಕ್ಕೆ ಕಾರಣವಾಗುತ್ತಿದೆ. ಇಲ್ಲಿ ಮಾಲಿನ್ಯವು ತುಂಬಾ ಹೆಚ್ಚಾಗಿದೆ. ನಮಗೆ ಈಗ ಅಭ್ಯಾಸ ಆಗಿದೆ, ಆದರೆ ಹೊಸಬರು ತಕ್ಷಣವೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ದಿಲ್ಲಿ ನಿವಾಸಿಯೋರ್ವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದಟ್ಟವಾದ ಹೊಗೆಯು ಸಾರಿಗೆ ವ್ಯವಸ್ಥೆ ಮೇಲೆಯೂ ಪ್ರಭಾವ ಬೀರಿದೆ. ದಿಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ವಿಮಾನಗಳ ಕಾರ್ಯಾಚರಣೆಗಳು ಸಾಮಾನ್ಯವಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News