ಗುಜರಾತ್ | ಮುಂದುವರಿದ ಭಾರೀ ಮಳೆಗೆ 7 ಮಂದಿ ಮೃತ್ಯು ; 6 ಸಾವಿರ ಜನರ ಸ್ಥಳಾಂತರ

Update: 2024-08-27 17:26 GMT

PC : PTI

ಗಾಂಧಿನಗರ : ಗುಜರಾತ್‌ನಲ್ಲಿ ಸತತ ಮೂರನೇ ದಿನವಾದ ಮಂಗಳವಾರ ಕೂಡ ಭಾರೀ ಮಳೆ ಮುಂದುವರಿದಿದ್ದು, ವಿವಿಧ ಭಾಗಗಳಲ್ಲಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಮಳೆಯಿಂದಾಗಿ ಅಣೆಕಟ್ಟು ಹಾಗೂ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಹಲವು ಪ್ರದೇಶಗಳು ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಜಲಾವೃತ ಪ್ರದೇಶಗಳಿಂದ 6 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಸೋಮವಾರ 7 ಮಂದಿ ಮೃತಪಟ್ಟಿದ್ದಾರೆ. ಗಾಂಧಿನಗರ, ಖೇಡಾ ಹಾಗೂ ವಡೋದರಾ ಜಿಲ್ಲೆಗಳಲ್ಲಿ ಗೋಡೆ ಕುಸಿದು ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಆನಂದ ಜಿಲ್ಲೆಯಲ್ಲಿ ಮರ ಉರುಳಿ ಬಿದ್ದು ಓರ್ವ ಹಾಗೂ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನದಿಗಳು ಹಾಗೂ ಅಣೆಕಟ್ಟುಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿರುವುದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿರುವ ನಡುವೆ ಮುನ್ನೆಚ್ಚರಿಕೆ ಕ್ರಮವಾಗಿ ಪಂಚಮಹಲ್, ವಲ್ಸದ್, ವಡೋದರಾ, ಭರೌಚ್, ಖೇಡಾ, ಗಾಂಧಿನಗರ, ಬೋಟಡ್ ಹಾಗೂ ಅರಾವಳಿ ಜಿಲ್ಲೆಗಳಲ್ಲಿ ಜಿಲ್ಲಾಡಳಿತಗಳು ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದೆ ಎಂದು ಅವರು ಹೇಳಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News