ಗುಜರಾತ್: ಪಾದರಕ್ಷೆ ಬಾಯಿಯಲ್ಲಿ ಹಿಡಿದುಕೊಳ್ಳುವಂತೆ ದಲಿತ ವ್ಯಕ್ತಿಗೆ ಬಲವಂತಪಡಿಸಿದ ಉದ್ಯಮಿ ವಿರುದ್ಧ ಪ್ರಕರಣ ದಾಖಲು
ಗಾಂಧಿನಗರ: ತನ್ನ ಪಾದರಕ್ಷೆಯನ್ನು ಬಲವಂತದಿಂದ ದಲಿತ ಯುವಕನೋರ್ವನ ಬಾಯಿಯಲ್ಲಿ ಹಿಡಿಸಿದ್ದ ಮಹಿಳಾ ಉದ್ಯಮಿ ಹಾಗೂ ಆಕೆಯ ಉದ್ಯೋಗಿಗಳ ವಿರುದ್ಧ ಗುರುವಾರ ಗುಜರಾತ್ ಪೋಲಿಸರು ಎಫ್‌ಐಆರ್ ದಾಖಲಿಸಿದ್ದಾರೆ.
ಮೊರ್ಬಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ರಾಣಿಬಾ ಇಂಡಸ್ಟ್ರೀಸ್ ಪ್ರೈ.ಲಿ.ನ ಒಡತಿ ವಿಭೂತಿ ಪಟೇಲ್ ಆರೋಪಿ ಮಹಿಳೆಯಾಗಿದ್ದಾರೆ.
ನಿಲೇಶ ದಲ್ಸಾನಿಯಾ (21) ಕಳೆದ ಅಕ್ಟೋಬರ್‌ನಲ್ಲಿ ವಿಭೂತಿ ಪಟೇಲ್‌ರ ಕಂಪನಿಯ ರಫ್ತು ವಿಭಾಗದಲ್ಲಿ 16 ದಿನಗಳ ಕಾಲ ಕೆಲಸ ಮಾಡಿದ್ದ. ಆತ ಅ.2ರಂದು ಕೆಲಸಕ್ಕೆ ಸೇರಿದಾಗ ಮಾಸಿಕ 12,000 ರೂ. ವೇತನದ ಭರವಸೆಯನ್ನು ನೀಡಲಾಗಿತ್ತು. ಆದರೆ ಅ.18ರಂದು ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ಬುಧವಾರ ಸಂಜೆ ನಿಲೇಶ ತನ್ನ ಹಿರಿಯ ಸೋದರ ಮೆಹುಲ್ ಮತ್ತು ನೆರೆಮನೆಯ ಭವೇಶ ಮಕ್ವಾನಾ ಜೊತೆಗೆ ತಾನು ದುಡಿದಿದ್ದ ಸಂಬಳವನ್ನು ಕೇಳಲು ರಾಣಿಬಾ ಇಂಡಸ್ಟ್ರೀಸ್‌ನ ಕಚೇರಿಗೆ ತೆರಳಿದ್ದ. ಈ ಸಂದರ್ಭ ವಿಭೂತಿ ಪಟೇಲ್, ಆಕೆಯ ಸೋದರ ಓಂ ಪಟೇಲ್,ಮ್ಯಾನೇಜರ್ ಪರೀಕ್ಷಿತ ಪಟೇಲ್ ಮತ್ತು ಇತರ ನಾಲ್ವರು ನಿಲೇಶ ಮೇಲೆ ಹಲ್ಲೆ ನಡೆಸಿದ್ದರು.
ಎಫ್‌ಐಆರ್‌ನಂತೆ ಆರೋಪಿಗಳು ನಿಲೇಶನನ್ನು ಲಿಫ್ಟ್ ಬಳಿಗೆ ಎಳೆದೊಯ್ದು, ಟೆರೇಸ್ ಮೇಲೆ ಕರದೊಯ್ದಿದ್ದರು. ಅಲ್ಲಿ ಆತನನ್ನು ಬೆಲ್ಟ್‌ನಿಂದ ಥಳಿಸಿ,ಮುಷ್ಟಿಯಿಂದ ಗುದ್ದಿ,ಕಾಲುಗಳಿಂದ ತುಳಿದಿದ್ದರು.
‘ವಿಭೂತಿ ಪಟೇಲ್ ತನ್ನ ಪಾದರಕ್ಷೆಯನ್ನು ನಾನು ಬಾಯಿಯಲ್ಲಿ ಹಿಡಿದುಕೊಳ್ಳುವಂತೆ ಮತ್ತು ಕ್ಷಮೆ ಯಾಚಿಸುವಂತೆ ಬಲವಂತಗೊಳಿಸಿದ್ದರು. ಈ ರಸ್ತೆಯಲ್ಲಿ ಕಂಡು ಬಂದರೆ ಮತ್ತು ಪೋಲಿಸರಿಗೆ ದೂರು ನೀಡಲು ಮುಂದಾದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದರು’ ಎಂದು ನಿಲೇಶ ದೂರಿನಲ್ಲಿ ಆರೋಪಿಸಿದ್ದಾನೆ.
ನಿಲೇಶನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರುವ ಪೋಲಿಸರು ಆರೋಪಿಗಳ ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.