ಗುಜರಾತ್ | ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಕರೆ ನೀಡಿದ್ದವರ ಮೇಲೆ FIR ದಾಖಲಿಸಿ : ನ್ಯಾಯಾಲಯ

Update: 2024-07-31 15:53 GMT

ಸಾಂದರ್ಭಿಕ ಚಿತ್ರ

ಅಹ್ಮದಾಬಾದ್ : ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಕರೆ ನೀಡಿದ್ದವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಗುಜರಾತ್‌ನ ಪಾಟಣ್‌ ಜಿಲ್ಲಾ ನ್ಯಾಯಾಲಯವು ಆದೇಶಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗುಜರಾತ್ ನ ಪಾಟಣ್‌ ಜಿಲ್ಲೆಯ ಬಲಿಸಾನಾ ಗ್ರಾಮದಲ್ಲಿ ಕಳೆದ ವರ್ಷ ನಡೆದ ಕೋಮು ಸಂಘರ್ಷ ನಡೆದಿತ್ತು. ಆ ಬಳಿಕ ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಒಂದು ಗುಂಪು ಕರೆ ನೀಡಿತ್ತು.

‘2023ರ ಜುಲೈ 16ರಂದು ನಡೆದ ಕೋಮು ಸಂಘರ್ಷವನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಮುಸ್ಲಿಮರೊಂದಿಗೆ ವ್ಯಾಪಾರ ವಹಿವಾಟು ನಡೆಸದಂತೆ ಬಹಿಷ್ಕಾರ ಹೇರಿದ್ದಾರೆ. ಅಂಗಡಿ ಮುಂಗಟ್ಟುಗಳ ಬಾಡಿಗೆ ಒಪ್ಪಂದವನ್ನೂ ರದ್ದು ಮಾಡಿಕೊಳ್ಳುವಂತೆ ಕರೆ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಅರ್ಜಿದಾರ ಮಕ್ಬುಲ್‌ ಹುಸೇನ್‌ ಶೇಖ್‌ ಅವರು ಪಾಟಣ್‌ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದಕ್ಕೂ ಮುನ್ನ ಅವರು ಪೊಲೀಸರ ಬಳಿ ದೂರು ನೀಡಿದ್ದರು. ಆದರೆ ಪೊಲೀಸರು ಆರ್ಥಿಕ ಬಹಿಷ್ಕಾರಕ್ಕೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿತ್ತು. ಯಾವುದೇ ಅಪರಾಧ ಕಂಡುಬಂದಿಲ್ಲ ಎಂದು ಪೊಲೀಸರು ವರದಿ ಸಲ್ಲಿಸಿದ್ದರು. ಸಂತ್ರಸ್ತರ ವಿಡಿಯೊ ಮತ್ತು ಹೇಳಿಕೆ ಪರಿಶೀಲಿಸಿದ ನ್ಯಾಯಾಲಯವು ಪೊಲೀಸರು ಸಲ್ಲಿಸಿದ್ದ ವರದಿ ಸ್ವೀಕರಿಸಲು ನಿರಾಕರಿಸಿತು.

ಜಿಲ್ಲಾ ನ್ಯಾಯಾಧೀಶ ಎಚ್‌.ಪಿ ಜೋಶಿ ಅವರು, ‘ಅರ್ಜಿದಾರರಾದ ಮಕ್ಬುಲ್‌ ಹುಸೇನ್‌ ಶೇಖ್‌ ಅವರ ದೂರಿನ ಆಧಾರದಲ್ಲಿ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿದವರ ಮೇಲೆ ಎಫ್‌ ಐ ಆರ್ ದಾಖಲಿಸಿ, ನಿಗದಿತ ಸಮಯದ ಒಳಗಾಗಿ ತನಿಖೆ ಪೂರ್ಣಗೊಳಿಸಿ’ ಎಂದು ಬಲಿಸನಾ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಅವರಿಗೆ ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News