“ಗುಜರಾತ್ ಪಾಕಿಸ್ತಾನವಲ್ಲ”: ರಾಜ್ಯಕ್ಕೆ ಬರಬೇಕಾದ ಯೋಜನೆ ಕಳೆದುಕೊಂಡದ್ದನ್ನು ಸಮರ್ಥಿಸಿದ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್
ಮುಂಬೈ: ಮಹಾರಾಷ್ಟ್ರಕ್ಕೆ ಬರಬೇಕಾದ ಯೋಜನೆಗಳು ಗುಜರಾತ್‌ಗೆ ಹೋಗಿವೆ ಎಂಬ ಟೀಕೆಗಳಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯಿಸಿದ್ದು, ʼಗುಜರಾತ್ ನಮ್ಮ ನೆರೆ ರಾಜ್ಯ, ಅದೇನು ಪಾಕಿಸ್ತಾನವಲ್ಲ. ಇನ್ನೊಂದು ರಾಜ್ಯಕ್ಕೆ ಯೋಜನೆಗಳು ಹೋಗುವುದು ಸಹಜʼ ಎಂದು ಸಮರ್ಥಿಸಿದ್ದಾರೆ.
ಇಂಡಿಯಾ ಗ್ಲೋಬಲ್ ಫಾರಂನಲ್ಲಿ ಮಾತನಾಡಿದ ಅವರು, ನಾವಿವತ್ತು ಸ್ಪರ್ಧಾತ್ಮಕ ಫೆಡರಲಿಸಂನಲ್ಲಿ ಇದ್ದೇವೆ. ಹೂಡಿಕೆಗಳಿಗಾಗಿ ಸ್ಪರ್ಧಿಸುತ್ತಿರುವ ರಾಜ್ಯಗಳ ಸಂಖ್ಯೆಯು 2-3 ರಿಂದ 10 ಕ್ಕೆ ತಲುಪಿವೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.
“ಒಂದು ಕಂಪೆನಿಯು ಗುಜರಾತಿಗೆ ಹೋಗಬಹುದು, ಕರ್ನಾಟಕ, ಅಥವಾ ದೆಹಲಿಗೆ ಹೋಗಬಹುದು.. ಅದು ಪಾಕಿಸ್ತಾನವಲ್ಲ, ನಮ್ಮದೇ ದೇಶಕ್ಕೆ ಯೋಜನೆಗಳು ಹೋಗುತ್ತವೆ” ಎಂದು ಅವರು ಹೇಳಿದರು.
ಪ್ರತಿಯೊಬ್ಬರೂ ರಾಜ್ಯಕ್ಕೆ ಬರಬೇಕೆಂದು ಮಹಾರಾಷ್ಟ್ರವು ನಿಜವಾಗಿಯೂ ಬಯಸುತ್ತದೆ. ವ್ಯಾಪಾರ ಮಾಡಲು ಸುಲಭವಾಗಲು ಮತ್ತು ವ್ಯಾಪಾರ ಮಾಡುವ ವೆಚ್ಚ ಕಡಿಮೆಯಾಗಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ನೆರೆಯ ಗುಜರಾತ್‌ಗೆ ಸೆಮಿಕಂಡಕ್ಟರ್‌ಗಳಂತಹ ಬೃಹತ್ ಹೂಡಿಕೆ ಯೋಜನೆಗಳನ್ನು ಕಳೆದುಕೊಂಡಿದ್ದಕ್ಕಾಗಿ ಪ್ರತಿಪಕ್ಷಗಳು ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಿದ ಬೆನ್ನಲ್ಲೇ ಫಡ್ನವೀಸ್ ಈ ಪ್ರತಿಕ್ರಿಯೆ ನೀಡಿದ್ದಾರೆ.