ಗುಜರಾತ್: ಐಎಸ್ಐಗೆ ಮಿಲಿಟರಿ ರಹಸ್ಯಗಳನ್ನು ಸೋರಿಕೆ ಮಾಡಿದ್ದ ಮೂವರಿಗೆ ಜೀವಾವಧಿ ಶಿಕ್ಷೆ
ಅಹ್ಮದಾಬಾದ್: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದಕ್ಕಾಗಿ ಮೂವರಿಗೆ ಇಲ್ಲಿಯ ಸೆಷನ್ಸ್ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಅಹ್ಮದಾಬಾದ್ನ ಜಮಾಲ್ಪುರ ನಿವಾಸಿಗಳಾದ ಸಿರಾಜುದ್ದೀನ್ ಕರ್ಮತಲಿ ಫಕೀರ್,ಮುಹಮ್ಮದ್ ಅಯೂಬ್ ಮತ್ತು ನವ್ಸಾದ್ ಮಕ್ಸೂದಲಿ ಸೈಯದ್ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಾಗಿದ್ದಾರೆ. ಆರೋಪಿಗಳ ವಿರುದ್ಧ 75 ಜನರು ಸಾಕ್ಷ್ಯ ನುಡಿದಿದ್ದರು.
2012,ಅಕ್ಟೋಬರ್ ನಲ್ಲಿ ಅಹ್ಮದಾಬಾದ್ ಕ್ರೈಬ್ರಾಂಚ್ ಗೆ ಜಮಾಲ್ಪುರದ ಕೆಲವರು ಐಎಸ್ಐ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯು ಲಭಿಸಿತ್ತು. ತನಿಖೆಯ ಬಳಿಕ ಆರೋಪಿಗಳನ್ನು ಬಂಧಿಸಿದ್ದ ಅದು ಮೊಬೈಲ್ ಪೋನ್ ಗಳು ಸೇರಿದಂತೆ ಸಾಕ್ಷಗಳನ್ನು ವಶಪಡಿಸಿಕೊಂಡಿತ್ತು. 2007ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ ಸಿರಾಜುದ್ದೀನ್ ಅಲ್ಲಿ ಪಾಕ್ ಗೂಢಚಾರ ತೈಮೂರ್ ಎಂಬಾತನನ್ನು ಭೇಟಿಯಾಗಿ ತರಬೇತಿ ಪಡೆದಿದ್ದ ಎನ್ನುವುದನ್ನು ತನಿಖೆಯು ಬಹಿರಂಗಗೊಳಿಸಿತ್ತು. ಬಳಿಕ ಆತ ಇತರ ಇಬ್ಬರು ಆರೋಪಿಗಳನ್ನು ತನ್ನೊಂದಿಗೆ ಸೇರಿಸಿಕೊಂಡಿದ್ದ.
ಪ್ರಕರಣದಲ್ಲಿ ಆರೋಪಿಗಳ ನಿರ್ವಾಹಕರಾಗಿದ್ದ ತೈಮೂರ್ ಮತ್ತು ತಾಹಿರ್ ಸೇರಿದಂತೆ ಒಂಭತ್ತು ವಿದೇಶಿಯರನ್ನೂ ಹೆಸರಿಸಲಾಗಿದ್ದು,ಅವರನ್ನು ಅಪೇಕ್ಷಿತ ವ್ಯಕ್ತಿಗಳೆಂದು ಪಟ್ಟಿ ಮಾಡಲಾಗಿತ್ತು.
ಆರೋಪಿಗಳಿಗೆ ಪ್ರತಿಫಲವಾಗಿ ತೈಮೂರ್ 2010 ಮೇ ಮತ್ತು 2012 ಸೆಪ್ಟೆಂಬರ್ ನಡುವೆ ಯುಎಇ ಮತ್ತು ಸೌದಿ ಅರೇಬಿಯದ ಹಲವರ ಹೆಸರಿನಲ್ಲಿ ವಿವಿಧ ಹಣ ವರ್ಗಾವಣೆ ಕಂಪನಿಗಳ ಮೂಲಕ 1.94 ಲ.ರೂ.ಗಳನ್ನು ರವಾನಿಸಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿತ್ತು. ಸಿರಾಜುದ್ದೀನ್ 2012ರಲ್ಲಿ ಬಂಧನವಾದಾಗಿನಿಂದ ಜೈಲಿನಲ್ಲಿದ್ದರೆ,ಇತರ ಇಬ್ಬರನ್ನು ಬಾಂಡ್ಗಳ ಮೇಲೆ ಬಿಡುಗಡೆಗೊಳಿಸಲಾಗಿತ್ತು.