ಗುಜರಾತ್: ಮುಸ್ಲಿಂ ಟಾಪರ್ ವಿದ್ಯಾರ್ಥಿನಿಯನ್ನು ಹೊರತುಪಡಿಸಿ ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಶಾಲೆ; ಆರೋಪ
ಅಹಮದಾಬಾದ್: ಗುಜರಾತಿನ ಶಾಲೆಯೊಂದರಲ್ಲಿ ಟಾಪರ್ ಆದ ಮುಸ್ಲಿಂ ವಿದ್ಯಾರ್ಥಿನಿಯನ್ನು ಹೊರತುಪಡಿಸಿ ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯಂದು 10 ಮತ್ತು 12 ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 10ನೇ ತರಗತಿಯಲ್ಲಿ ಶೇ.87 ಅಂಕ ಪಡೆದು ಟಾಪರ್ ಆಗಿದ್ದ ಅರ್ನಾಝ್ ಬಾನು ಎಂಬ ಬಾಲಕಿಗೆ ಮೊದಲ ಬಹುಮಾನ ಪಡೆಯುವ ನಿರೀಕ್ಷೆ ಇತ್ತು.
ಆದರೆ, ಬಹುಮಾನ ವಿತರಿಸುವಾಗ ಆಕೆಯ ಹೆಸರನ್ನೇ ಕರೆಯದೇ ಎರಡನೇ ಸ್ಥಾನ ಪಡೆದವರಿಗೆ ಬಹುಮಾನವನ್ನು ವಿತರಿಸಲಾಗಿದೆ. ಈ ಘಟನೆ ಗುಜರಾತಿನ ಮೆಹ್ಸಾನಾ ಜಿಲ್ಲೆಯ ಲುನಾವಾ ಗ್ರಾಮದಲ್ಲಿರುವ ಕೆಟಿ ಪಟೇಲ್ ಸ್ಮೃತಿ ವಿದ್ಯಾಲಯದಲ್ಲಿ ನಡೆದಿದೆ.
ಬಹುಮಾನ ಪಡೆಯುವ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿನಿ ಅಳುತ್ತಲೇ ಮನೆಗೆ ಬಂದಿದ್ದು, ಮನೆಯವರು ಕೇಳುವಾಗ ಶಾಲೆಯಲ್ಲಿ ನಡೆದ ವಿಚಾರವನ್ನು ವಿವರಿಸಿದ್ದಾಳೆ. ಈ ಬಗ್ಗೆ ಶಾಲಾ ಶಿಕ್ಷಕರಲ್ಲಿ ಬಾಲಕಿಯ ಪೋಷಕರು ಪ್ರಶ್ನಿಸಿದಾಗ ಸರಿಯಾದ ಉತ್ತರವನ್ನು ಅವರು ನೀಡಿಲ್ಲ ಎಂದು ಆರೋಪಿಸಲಾಗಿದೆ.
"ತನ್ನದಾಗಬೇಕಾದ ಪ್ರಶಸ್ತಿಯನ್ನು ಎರಡನೇ ಸ್ಥಾನವನ್ನು ಪಡೆದ ವಿದ್ಯಾರ್ಥಿಗೆ ನೀಡಲಾಯಿತು ಎಂದು ಅವಳು ನಮಗೆ ತಿಳಿಸಿದಳು. ನಾನು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರೊಂದಿಗೆ ಘಟನೆ ಬಗ್ಗೆ ವಿವರಣೆ ಕೇಳಿದಾಗ ಅವರು ಅಸ್ಪಷ್ಟ ಉತ್ತರ ನೀಡಿದ್ದಾರೆ. ಆಕೆಗೆ ಜನವರಿ 26 ರಂದು ಬಹುಮಾನವನ್ನು ನೀಡುವುದಾಗು ಅವರು ಹೇಳಿದ್ದಾರೆ. ಆದರೆ, ಆಗಸ್ಟ್ 15 ರಂದು ಎಲ್ಲರಿಗೂ ಬಹುಮಾನ ನೀಡಿದ್ದರೂ, ಆಕೆಗೆ ಮಾತ್ರ ಜನವರಿ 26 ಕ್ಕೆ ಏಕೆ ಬಹುಮಾನ ನೀಡಬೇಕು? ನಮ್ಮ ಕುಟುಂಬ ಇಲ್ಲಿ ತಲೆಮಾರುಗಳಿಂದ ವಾಸಿಸುತ್ತಿದ್ದರೂ ತಾರತಮ್ಯವನ್ನು ಎದುರಿಸಿರಲಿಲ್ಲ. ಆದರೆ ಈಗ ನನ್ನ ಮಗಳನ್ನು ಉದ್ದೇಶಪೂರ್ವಕವಾಗಿ ಆಕೆಗೆ ಅರ್ಹವಾದ ಪ್ರಶಸ್ತಿಗಾಗಿ ಕಡೆಗಣಿಸಲಾಗಿದೆ” ಎಂದು ಬಾಲಕಿಯ ತಂದೆ ಸನ್ವರ್ ಖಾನ್ ನೋವು ತೋಡಿಕೊಂಡಿದ್ದಾರೆ.
ಆದರೆ, ತಾರತಮ್ಯದ ಆರೋಪವನ್ನು ಕೆಟಿ ಪಟೇಲ್ ಸ್ಮೃತಿ ವಿದ್ಯಾಲಯದ ಪ್ರಾಂಶುಪಾಲರಾದ ಬಿಪಿನ್ ಪಟೇಲ್ ಅವರು ನಿರಾಕರಿಸಿದ್ದಾರೆ. Vibes Of India ದೊಂದಿಗೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟೀಕರಣ ನೀಡಿದ ಅವರು, “ನಮ್ಮ ಶಾಲೆಯು ಯಾವುದೇ ರೀತಿಯ ತಾರತಮ್ಯದ ವಿರುದ್ಧ ಕಠಿಣ ನೀತಿಯನ್ನು ತೆಗೆದುಕೊಳ್ಳುತ್ತದೆ. ಖಂಡಿತವಾಗಿಯೂ, ಅರ್ಹ ವಿದ್ಯಾರ್ಥಿನಿಗೆ ಜನವರಿ 26 ರಂದು ಬಹುಮಾನವನ್ನು ನೀಡಲಾಗುವುದು. ಗೊತ್ತುಪಡಿಸಿದ ದಿನದಂದು ಅವರು ಗೈರುಹಾಜರಾಗಿದ್ದರು, ಇದು ವಿತರಣೆಗೆ ಅಡ್ಡಿಯಾಯಿತು” ಎಂದ ಹೇಳಿದ್ದಾರೆ.
ಆದರೆ, ಈ ಹೇಳಿಕೆಯನ್ನು ಸನ್ವರ್ ಖಾನ್ ನಿರಾಕರಿಸಿದ್ದಾರೆ, “ಆ ದಿನ ನನ್ನ ಮಗಳು ಶಾಲೆಗೆ ಹೋಗಿದ್ದಳು. ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಅವನ್ನು ಪರಿಶೀಲಿಸಬಹುದು” ಎಂದು ಅವರು ಹೇಳಿದ್ದಾರೆ.
ಶಾಲೆಯ ಶಿಕ್ಷಕ ಅನಿಲ್ ಪಟೇಲ್ ಮಾತನಾಡಿ, “ಆಗಸ್ಟ್ 15 ರ ಕಾರ್ಯಕ್ರಮ ನಮ್ಮ ವಿದ್ಯಾರ್ಥಿಗಳ ಸಾಧನೆಗಳನ್ನು ಗುರುತಿಸುವ ಸಣ್ಣ ಕಾರ್ಯಕ್ರಮವಾಗಿದೆ. ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದವರಿಗೆ ಬಹುಮಾನಗಳನ್ನು ಔಪಚಾರಿಕವಾಗಿ ಜನವರಿ 26 ರಂದು ನೀಡಲಾಗುವುದು. ಯಾವುದೇ ಕುಂದುಕೊರತೆಗಳನ್ನು ಪರಿಹರಿಸಲು ನಾವು ಬದ್ಧರಾಗಿರುತ್ತೇವೆ” ಎಂದು ಹೇಳಿದ್ದಾರೆ.