ಗುಜರಾತ್: ಕಳ್ಳತನದ ಶಂಕೆಯಲ್ಲಿ ಇಬ್ಬರು ಆದಿವಾಸಿಗಳನ್ನು ಥಳಿಸಿ ಹತ್ಯೆಗೈದ ಗುಂಪು
ನರ್ಮದಾ (ಗುಜರಾತ್): ನರ್ಮದಾ ಜಿಲ್ಲೆಯಲ್ಲಿನ ಏಕತೆಯ ಪ್ರತಿಮೆಯ ಬಳಿ ನಿರ್ಮಾಣ ಹಂತದಲ್ಲಿರುವ ಆದಿವಾಸಿ ವಸ್ತು ಸಂಗ್ರಹಾಲಯದಲ್ಲಿ ಕಳ್ಳತನ ಮಾಡಲಾಗಿದೆ ಎಂಬ ಶಂಕೆಯಲ್ಲಿ ಇಬ್ಬರು ಆದಿವಾಸಿ ಯುವಕರನ್ನು ಆರು ಮಂದಿ ಥಳಿಸಿ ಹತ್ಯೆಗೈದಿರುವ ಘಟನೆ ನಡೆದಿದೆ. ಆ ಎಲ್ಲ ಆರು ಮಂದಿಯನ್ನು ಬಂಧಿಸಲಾಗಿದೆ.
ಮೃತ ಆದಿವಾಸಿ ಯುವಕರನ್ನು ಜಯೇಶ್ ತಡ್ವಿ (34) ಹಾಗೂ ಸಂಜಯ್ ತಡ್ವಿ (35) ಎಂದು ಗುರುತಿಸಲಾಗಿದೆ.
ಈ ಹತ್ಯೆಯ ನಂತರ, ವಿಶ್ವ ಆದಿವಾಸಿಗಳ ದಿನವಾದ ಶುಕ್ರವಾರದಂದು ಏಕ್ತಾ ನಗರ್ ಬಂದ್ ಗೆ ಆಪ್ ನಾಯಕ ಹಾಗೂ ದೇದಿಯಪಾಡ ಕ್ಷೇತ್ರದ ಶಾಸಕ ಚೈತರ್ ವಾಸವ ಕರೆ ನೀಡಿದ್ದಾರೆ.
ಮಂಗಳವಾರ ರಾತ್ರಿ ವಸ್ತು ಸಂಗ್ರಹಾಲಯದ ಆವರಣವನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಜಯೇಶ್ ತಡ್ವಿ ಹಾಗೂ ಸಂಜಯ್ ತಡ್ವಿ ಮೇಲೆ ಹಲ್ಲೆ ನಡೆಸಲಾಗಿದೆ. ಅವರಿಬ್ಬರ ಮೇಲೆ ಕಳ್ಳತನದ ಆರೋಪ ಹೊರಿಸಿರುವ ಆರೋಪಿಗಳು, ಅವರನ್ನು ಹಗ್ಗದಿಂದ ಕಟ್ಟಿ ಹಾಕಿ, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಬಂಧಿತ ಆರೋಪಿಗಳನ್ನು ಮಾರ್ಗಿಶ್ ಹಿರ್ಪಾರ, ದೀಪು ಯಾದವ್, ಉಮೇಶ್ ಗುಪ್ತ, ದೇವಲ್ ಪಟೇಲ್, ಶೈಲೇಶ್ ತವಿಯಾಡ್ ಹಾಗೂ ವನರಾಜ್ ತವಿಯಾಡ್ ಎಂದು ಗುರುತಿಸಲಾಗಿದ್ದು, ಎಲ್ಲ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ನಡುವೆ, ಆದಿವಾಸಿ ಯುವಕರ ಹತ್ಯೆ ಪ್ರಕರಣದಲ್ಲಿ ಪೊಲೀಸರು ತ್ವರಿತ ಕ್ರಮ ಕೈಗೊಂಡಿಲ್ಲ ಎಂದು ಆಪ್ ಶಾಸಕ ಚೈತರ್ ವಾಸವ ಆರೋಪಿಸಿದ್ದಾರೆ.