1971ರಲ್ಲಿ ನಾನು ಅಧಿಕಾರದಲ್ಲಿದ್ದಿದ್ದರೆ ಅಂದೇ ಪಾಕಿಸ್ತಾನದಿಂದ ಕರ್ತಾರ್ ಪುರ್ ಸಾಹಿಬ್ ಅನ್ನು ವಾಪಸ್ ಪಡೆಯುತ್ತಿದ್ದೆ: ಪ್ರಧಾನಿ ಮೋದಿ
ಪಟಿಯಾಲ: ನಾನೇನಾದರೂ 1971ರಲ್ಲಿ ಅಧಿಕಾರದಲ್ಲಿದ್ದಿದ್ದರೆ, ಪಾಕಿಸ್ತಾನದ ಸೇನಾ ತುಕಡಿಗಳನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಪಾಕಿಸ್ತಾನದಿಂದ ಕರ್ತಾರ್ ಪುರ್ ಸಾಹಿಬ್ ಅನ್ನು ವಾಪಸ್ ಪಡೆಯುತ್ತಿದ್ದೆ ಎಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪಟಿಯಾಲದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಪಂಜಾಬ್ ಹಾಗೂ ಸಿಖ್ಖರು ದೇಶ ನಿರ್ಮಾಣ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಶ್ಲಾಘಿಸಿದರು. ಇದೇ ವೇಳೆ ರಾಜ್ಯದಲ್ಲಿನ ಆಡಳಿತಾರೂಢ ಆಪ್ ಸರಕಾರವು ಭ್ರಷ್ಟಾಚಾರ ಮತ್ತು ಮಾದಕ ದ್ರವ್ಯ ವ್ಯವಹಾರದಲ್ಲಿ ತೊಡಗಿದೆ ಎಂದೂ ಅವರು ಆರೋಪಿಸಿದರು.
ಗುರುನಾನಕ್ ದೇವ್ ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆದಿದ್ದ ಹಾಗೂ ಸಿಖ್ಖರ ಪಾಲಿಗೆ ಪವಿತ್ರವಾಗಿರುವ ಕರ್ತಾರ್ ಪುರ್ ಸಾಹಿಬ್ ಗುರುದ್ವಾರದಂಥ ಭಾವನಾತ್ಮಕ ವಿಷಯವನ್ನು ಮುನ್ನೆಲೆಗೆ ತಂದ ಪ್ರಧಾನಿ ಮೋದಿ, ಕಾಂಗ್ರೆಸ್ ತನ್ನ ಅಧಿಕಾರದ ದಾಹಕ್ಕಾಗಿ ದೇಶವನ್ನು ವಿಭಜಿಸಿತು ಎಂದು ದೂರಿದರು.
ಜೂನ್ 1ರಂದು ರಾಜ್ಯದಲ್ಲಿ ನಡೆಯಲಿರುವ ಏಳನೆ ಹಂತದ ಲೋಕಸಭಾ ಚುನಾವಣೆಯಲ್ಲಿ ಪಟಿಯಾಲ ಲೋಕಸಭಾ ಕ್ಷೇತ್ರಕ್ಕೂ ಮತದಾನ ನಡೆಯಲಿದ್ದು, ರಾಜ್ಯದಲ್ಲಿ ಇದು ಪ್ರಧಾನಿ ಮೋದಿಯವರ ಪ್ರಪ್ರಥಮ ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶವಾಗಿದೆ.