ದಿಲ್ಲಿಯ ಪಾಲಿನ ನೀರನ್ನು ಹರ್ಯಾಣ ಬಿಡುಗಡೆ ಮಾಡುತ್ತಿಲ್ಲ : ಸಚಿವೆ ಅತಿಶಿ ಆರೋಪ
ಹೊಸದಿಲ್ಲಿ : ಯಮುನಾ ನದಿ ನೀರಿನಲ್ಲಿ ತನ್ನ ರಾಜ್ಯದ ಪಾಲನ್ನು ಹರ್ಯಾಣ ಬಿಡುಗಡೆಗೊಳಿಸುತ್ತಿಲ್ಲ ಎಂದು ಆರೋಪಿಸಿರುವ ದಿಲ್ಲಿ ಜಲ ಸಚಿವೆ ಅತಿಶಿ ಅವರು,ಈ ಕುರಿತು ತಾನು ಕೇಂದ್ರ ಸರಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಬಿರುಬಿಸಿಲಿನಿಂದಾಗಿ ದಿಲ್ಲಿಯು ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿದ್ದು, ನಗರದ ಕೆಲವು ಭಾಗಗಳಲ್ಲಿ ತಾಪಮಾನವು ಸುಮಾರು 50 ಡಿ.ಸೆ.ಗೆ ತಲುಪಿದೆ. ಯಮುನಾ ನದಿಯಲ್ಲಿ ದಿಲ್ಲಿಯ ಪಾಲನ್ನು ಹರ್ಯಾಣ ಸರಕಾರ ಬಿಡುಗಡೆ ಮಾಡಿಲ್ಲ. ಇದು ನೀರು ಪೂರೈಕೆಯಲ್ಲಿ ಕೊರತೆಗೆ ಕಾರಣವಾಗಿದೆ ಎಂದು ಅತಿಶಿ ಆರೋಪಿಸಿದ್ದಾರೆ.
ಗುರುವಾರ ವಝೀರಾಬಾದ್ ಯಮುನಾ ಜಲಾಶಯವನ್ನು ಪರಿಶೀಲಿಸಿದ ಬಳಿಕ ಅತಿಶಿ ತನ್ನ ಎಕ್ಸ್ ಪೋಸ್ಟ್ನಲ್ಲಿ, ಯಮುನಾ ನದಿಯ ಮಟ್ಟವು 674 ಅಡಿ ಇರಬೇಕು, ಆದರೆ ಕೇವಲ 670.3 ಅಡಿ ನೀರಿದೆ. ಇದರಿಂದಾಗಿ ದಿಲ್ಲಿಯ ವಿವಿಧ ಭಾಗಗಳಲ್ಲಿ ನೀರಿನ ಕೊರತೆಯುಂಟಾಗಿದೆ ಎಂದು ಹೇಳಿದ್ದಾರೆ.
ದಿಲ್ಲಿ ತನ್ನ ಪಾಲಿನ ನೀರನ್ನು ಪಡೆಯುವಂತೆ ನೋಡಿಕೊಳ್ಳುವುದು ಕೇಂದ್ರ ಸರಕಾರದ ಹೊಣೆಯಾಗಿದೆ. ದಿಲ್ಲಿಗೆ ನೀರನ್ನು ನಿಲ್ಲಿಸಲು ಹರ್ಯಾಣಕ್ಕೆ ಯಾವುದೇ ಹಕ್ಕು ಇಲ್ಲ ಎಂದು ಅವರು ಹೇಳಿದ್ದಾರೆ.