ಹಾಥರಸ್ ಕಾಲ್ತುಳಿತ ಪ್ರಕರಣ : ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಣೆ

Update: 2024-07-12 14:26 GMT

ಸುಪ್ರೀಂ ಕೋರ್ಟ್ | PTI 

ಹೊಸದಿಲ್ಲಿ: ಹಾಥರಸ್ ಕಾಲ್ತುಳಿತ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಐವರು ಸದಸ್ಯರ ಸಮಿತಿ ನಿಯೋಜಿಸುವಂತೆ ಕೋರಿ ನ್ಯಾಯವಾದಿ ವಿಶಾಲ್ ತಿವಾರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ನ ಮೂವರು ಸದಸ್ಯರ ಪೀಠ, ಖಂಡಿತವಾಗಿ ಇದೊಂದು ಮನ ಕಲಕುವ ಘಟನೆ ಎಂದು ಅಭಿಪ್ರಾಯಿಸಿತು. ಇದೇ ಸಂದರ್ಭ ಪೀಠ ಇಂತಹ ಪ್ರಕರಣವನ್ನು ವಿಚಾರಣೆ ನಡೆಸಲು ಉಚ್ಚ ನ್ಯಾಯಾಲಯ ಸಾಕಷ್ಟು ಸಮರ್ಥವಾಗಿದೆ ಎಂದು ಹೇಳಿತು. ತಿವಾರಿ ಅರ್ಜಿಯನ್ನು ಆಲಿಸಿದ ಚಂದ್ರಚೂಡ್ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ್ ಹಾಗೂ ಮನೋಜ್ ಮಿಶ್ರಾ ಕೂಡ ಇದ್ದರು.

ದೂರುದಾರರ ವಕೀಲರು ನ್ಯಾಯಾಲಯದಲ್ಲಿ ಈ ವಿಷಯದ ಕುರಿತು ಸೂಕ್ತ ನಿರ್ದೇಶನ, ಆದೇಶಗಳನ್ನು ನೀಡುವಂತೆ ಹೇಳುತ್ತಲೇ ಇದ್ದರು ಹಾಗೂ ಇದು ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಿಸಿದ್ದು ಎಂದು ಪ್ರತಿಪಾದಿಸಿದರು. ಆದರೆ, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಈ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ತಿರಸ್ಕರಿಸಿದರು ಹಾಗೂ ಈ ಅರ್ಜಿಯ ಪರಿಹಾರಕ್ಕಾಗಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ತಿಳಿಸಿದರು.

ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಐವರು ಸದಸ್ಯರ ತಜ್ಞರ ಸಮಿತಿಯನ್ನು ನಿಯೋಜಿಸಲು ನಿರ್ದೇಶನ ನೀಡುವಂತೆ ಕೋರಿ ತಿವಾರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ಸಭೆಯಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಮಾರ್ಗಸೂಚಿಗಳು, ಸುರಕ್ಷಾ ಕ್ರಮಗಳನ್ನು ರೂಪಿಸಲು ಸಮಿತಿಗೆ ನಿರ್ದೇಶಿಸುವಂತೆ ಹಾಗೂ ಪ್ರಕರಣದ ಕುರಿತಂತೆ ನ್ಯಾಯಾಲಯ ಮೇಲ್ವಿಚಾರಣೆಯ ತನಿಖೆ ನಡೆಸುವಂತೆ ಕೂಡ ಅವರು ಸುಪ್ರೀಂ ಕೋರ್ಟ್ ಅನ್ನು ಕೋರಿದ್ದರು.

ಈ ಭಯಾನಕ ಕಾಲ್ತುಳಿತ ಘಟನೆ ಕುರಿತ ಸ್ಥಿತಿಗತಿ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲು ಉತ್ತರಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡುವಂತೆ ಹಾಗೂ ಇದಕ್ಕೆ ಕಾರಣರಾದ ವ್ಯಕ್ತಿಗಳು, ಆಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡುವಂತೆ ತಿವಾರಿ ಅರ್ಜಿಯಲ್ಲಿ ಕೋರಿದ್ದರು.

ಜುಲೈ 2ರಂದು ಉತ್ತರಪ್ರದೇಶದ ಹಾಥರಸ್ ಜಿಲ್ಲೆಯ ಪುಲಿರೈ ಗ್ರಾಮದಲ್ಲಿ ಭೋಲೆ ಬಾಬಾನ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ 121 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶ ಪೊಲೀಸರು ಸಂಘಟಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News