ಹಾಥ್ರಸ್‌ ಕಾಲ್ತುಳಿತ ಘಟನೆ | ಸಂತ್ರಸ್ತರಿಗೆ ಪರಿಹಾರ ಹೆಚ್ಚಿಸುವಂತೆ ಆಗ್ರಹಿಸಿ ಸಿಎಂ ಆದಿತ್ಯನಾಥ್ ಗೆ ರಾಹುಲ್ ಗಾಂಧಿ ಪತ್ರ

Update: 2024-07-07 16:34 GMT

 Photo Credit: ANI

ಲಕ್ನೊ : ಹಾಥ್ರಸ್‌ ಕಾಲ್ತುಳಿತ ಘಟನೆಗೆ ಸಂಬಂಧಿಸಿ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದಾರೆ.

ರಾಹುಲ್ ಗಾಂಧಿ ಅವರು ಪತ್ರದಲ್ಲಿ ಕಾಲ್ತುಳಿತ ಘಟನೆ ಸಂತ್ರಸ್ತರ ಕುಟುಂಬದ ಸಮಸ್ಯೆಗಳನ್ನು ವಿವರಿಸಿದ್ದಾರೆ. ಅಲ್ಲದೆ, ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಹಾಗೂ ಅದನ್ನು ಶೀಘ್ರದಲ್ಲಿ ಸಂತ್ರಸ್ತರ ಕುಟುಂಬಕ್ಕೆ ಒದಗಿಸುವಂತೆ ಆಗ್ರಹಿಸಿದ್ದಾರೆ.

ರಾಹುಲ್ ಗಾಂಧಿ ಅವರು ಜುಲೈ 6ರ ದಿನಾಂಕದ ಈ ಪತ್ರವನ್ನು ಸಾಮಾಜಿಕ ಮಾಧ್ಯಮದ ವೇದಿಕೆ ‘ಎಕ್ಸ್’ನಲ್ಲಿ ರವಿವಾರ ಪೋಸ್ಟ್ ಮಾಡಿದ್ದಾರೆ.

ತಾನು ಶುಕ್ರವಾರ ಅಲಿಗಢ ಹಾಗೂ ಹಾಥ್ರಸ್ಗೆ ತೆರಳಿ ಸಂತ್ರಸ್ತ ಕುಟುಂಬದೊಂದಿಗೆ ನಡೆಸಿದ ಸಂವಹನದ ಕುರಿತು ಮಾತನಾಡಿರುವ ರಾಹುಲ್ ಗಾಂಧಿ, ಈ ಕುಟುಂಬಗಳಿಗೆ ಉಂಟಾದ ನಷ್ಟವನ್ನು ತುಂಬಿ ಕೊಡಲು ಯಾವುದೇ ಪರಿಹಾರದಿಂದ ಸಾಧ್ಯವಿಲ್ಲ ಎಂದಿದ್ದಾರೆ.

121 ಮಂದಿ ಸಾವನ್ನಪ್ಪಲು ಕಾರಣವಾದ ಈ ದುರಂತದಲ್ಲಿ ಜಿಲ್ಲಾಡಳಿತದ ಲೋಪವನ್ನು ಗುರುತಿಸಲು ಪಕ್ಷಪಾತರಹಿತ ತನಿಖೆ ನೆರವಾಗಬಹುದು. ಇದು ಭವಿಷ್ಯದಲ್ಲಿ ಇಂತಹ ಘಟನೆಗಳು ಮತ್ತೆ ಸಂಭವಿಸುವುದನ್ನು ತಡೆಯಲು ಹಾಗೂ ತಪ್ಪೆಸಗಿದವರನ್ನು ಶಿಕ್ಷಿಸಲು ನೆರವಾಗಬಹುದು ಎಂದು ಅವರು ಬರೆದಿದ್ದಾರೆ.

ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ತಾನು ಸಿದ್ಧವಾಗಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ ಹಾಥ್ರಸ್ನಲ್ಲಿ ಶುಕ್ರವಾರ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿದ್ದಾರೆ. ಅಲ್ಲದೆ, ಘಟನೆ ಕುರಿತು ಹಾಗೂ ಸ್ವೀಕರಿಸಿದ ನೆರವಿನ ಕುರಿತು ವಿಚಾರಣೆ ನಡೆಸಿದ್ದಾರೆ. ಅವರ ಸಮಸ್ಯೆಗಳನ್ನು ಸೂಕ್ತ ವೇದಿಕೆ ಮುಂದೆ ಕೊಂಡೊಯ್ಯಲಾಗುವುದು ಹಾಗೂ ಸಾಧ್ಯವಾಗುವ ರೀತಿಯಲ್ಲಿ ನೆರವು ನೀಡಲಾಗುವುದು ಎಂದು ರಾಹುಲ್ ಗಾಂಧಿ ಅವರಿಗೆ ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News