ಮಾರ್ಚ್ 1ರಿಂದ ಜೂನ್ 18ರ ನಡುವೆ ಬಿಸಿಲ ಝಳಕ್ಕೆ ದೇಶದಲ್ಲಿ 110 ಮಂದಿ ಬಲಿ: ವರದಿ

Update: 2024-06-20 11:26 GMT

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಮಾರ್ಚ್ 1ರಿಂದ ಜೂನ್ 18ರ ನಡುವೆ ಇಡೀ ದೇಶವನ್ನು ವ್ಯಾಪಿಸಿದ್ದ ಬಿಸಿಲ ಝಳಕ್ಕೆ ಕನಿಷ್ಠ ಪಕ್ಷ 110 ಮಂದಿ ಮೃತಪಟ್ಟಿದ್ದು, ಉಷ್ಣಾಘಾತಕ್ಕೆ 40,000ಕ್ಕೂ ಹೆಚ್ಚು ಮಂದಿ ತುತ್ತಾಗಿದ್ದಾರೆ ಎಂದು ಗುರುವಾರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು newindianexpress.com ವರದಿ ಮಾಡಿದೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(NCDC)ದ ರಾಷ್ಟ್ರೀಯ ಉಷ್ಣ ಸಂಬಂಧಿ ಅಸ್ವಸ್ಥತೆ ಮತ್ತು ಮರಣ ನಿಗಾವಣೆ ದತ್ತಾಂಶದ ಪ್ರಕಾರ, ಉತ್ತರ ಪ್ರದೇಶ ಬಿಸಿಲ ಝಳದಿಂದ ತೀವ್ರವಾಗಿ ಬಾಧಿತವಾಗಿದ್ದು, ಇಲ್ಲಿ ಇಲ್ಲಿಯವರೆಗೆ 36 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನಂತರದ ಸ್ಥಾನಗಳಲ್ಲಿ ಬಿಹಾರ ಮತ್ತು ರಾಜಸ್ಥಾನಗಳಿವೆ.

ಈ ದತ್ತಾಂಶದ ಪ್ರಕಾರ, ಜೂನ್ 18ರಂದು ಒಂದೇ ದಿನ ಆರು ಮಂದಿ ಉಷ್ಣಾಘಾತಕ್ಕೆ ಬಲಿಯಾಗಿದ್ದಾರೆ.

ಉತ್ತರ ಮತ್ತು ಪೂರ್ವ ಭಾರತದ ಭಾಗಗಳು ದೀರ್ಘಕಾಲೀನ ಬಿಸಿ ಗಾಳಿಯ ಹಿಡಿತಕ್ಕೆ ಸಿಲುಕಿದ್ದು, ಉಷ್ಣಾಘಾತಕ್ಕೆ ತುತ್ತಾಗುತ್ತಿರುವ ಸಂತ್ರಸ್ತರ ಸಂಖ್ಯೆ ದಿನೇದಿನೇ ಏರಿಕೆಯಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಇಂತಹ ರೋಗಿಗಳಿಗೆ ವಿಶೇಷ ಘಟಕಗಳನ್ನು ಸ್ಥಾಪಿಸುವಂತೆ ಕೇಂದ್ರ ಸರಕಾರವು ಆಸ್ಪತ್ರೆಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News