ಮಹಾರಾಷ್ಟ್ರದಲ್ಲಿ ಭಾರೀ ಮಳೆ | ನಾಲ್ವರು ಮೃತ್ಯು; ಹಲವು ಪ್ರದೇಶಗಳು ಜಲಾವೃತ

Update: 2024-07-25 15:53 GMT

PC :PTI 

ಹೊಸದಿಲ್ಲಿ : ಮುಂಬೈ, ಪುಣೆ, ಥಾಣೆ, ಪಾಲ್ಘಾರ್ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಮಳೆಯಿಂದ ಉಂಟಾದ ನೆರೆಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ವಿಮಾನ ಹಾಗೂ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. ಮುಂಬೈಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಗುರುವಾರ ರಜೆ ಘೋಷಿಸಿದೆ.

ಪುಣೆಯ ಪಿಂಪ್ರಿ-ಚಿಚ್ವಾಡ್‌ನ ಹಲವು ವಸತಿ ಪ್ರದೇಶಗಳು ಜಲಾವೃತವಾಗಿದೆ. ಜಿಲ್ಲೆಯಲ್ಲಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ನೆರೆ ಸಂತ್ರಸ್ತರನ್ನು ಸ್ಥಳಾಂತರಿಸಲು ಭಾರತೀಯ ಸೇನೆಯ ಹಲವು ತುಕುಡಿಗಳನ್ನು ನಿಯೋಜಿಸಲಾಗಿದೆ. ಇದುವರೆಗೆ ಸುಮಾರು 400 ಜನರನ್ನು ಸೇನೆ ಸ್ಥಳಾಂತರಿಸಿದೆ. ನೆರೆಯಿಂದ ತೀವ್ರವಾಗಿ ಸಂತ್ರಸ್ತವಾದ ಸಿಂಹಗಢ ರಸ್ತೆ ಪ್ರದೇಶಕ್ಕೆ ಸೇನೆಯ ಎರಡು ತುಕಡಿಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಎನ್‌ಡಿಆರ್‌ಎಫ್, ಅಗ್ನಿ ಶಾಮಕ ದಳ ಹಾಗೂ ಜಿಲ್ಲಾ, ನಗರ ವಿಪತ್ತು ನಿರ್ವಹಣಾ ಘಟಕ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.

ಅಗತ್ಯ ಉಂಟಾದರೆ, ಪುಣೆಯ ಮಳೆ ಸಂತ್ರಸ್ತ ಜನರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗುವುದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.

ಭಾರೀ ಮಳೆಯಿಂದಾಗಿ ಹಲವು ವಿಮಾನ ಯಾನ ಸಂಸ್ಥೆಗಳ ವಿಮಾನ ಹಾಗೂ ರೈಲು ಸಂಚಾರದಲ್ಲಿ ವಿಳಂಬ ಉಂಟಾಗಿದೆ.

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಮುಂಬೈಯ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ನೀಡುವಂತೆ, ರಕ್ಷಣೆ, ಪರಿಹಾರ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದಾರೆ.

ರಾಜ್ಯದ ಹಲವು ಪ್ರದೇಶಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪುಣೆಯಲ್ಲಿ ಮಳೆ ಸಂಬಂಧಿ ಘಟನೆಗಳಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ನಗರದ ಡೆಕ್ಕನ್ ಪ್ರದೇಶದಲ್ಲಿ ಭಾರೀ ಮಳೆಯಿಂದ ನೆರೆಯಲ್ಲಿ ಮುಳುಗಿದ ತಮ್ಮ ಮೊಟ್ಟೆ ತಿಂಡಿಗಳನ್ನು ಮಾರಾಟ ಮಾಡುವ ಕೈಗಾಡಿಯನ್ನು ಮೇಲೆತ್ತುವ ಸಂದರ್ಭ ಮೂವರು ವ್ಯಕ್ತಿಗಳು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ನಗರದ ತಹ್ಮಿನಿ ಘಟ್ಟ ವಿಭಾಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಓರ್ವ ಮೃತಪಟ್ಟಿದ್ದಾರೆ ಹಾಗೂ ಇನ್ನೋರ್ವ ಗಾಯಗೊಂಡಿದ್ದಾರೆ. ಲಾವಾಸಾದಲ್ಲಿ ಬಂಗ್ಲೆಯೊಂದರ ಮೇಲೆ ಮಣ್ಣು ಜರಿದಿದ್ದು, ಅದರ ಒಳಗೆ ನಾಲ್ಕರಿಂದ ಐದು ಮಂದಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ರಾಜ್ಯದ ರಾಯಗಡ ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಶಾಲೆ ಕಾಲೇಜು ಹಾಗೂ ಇತರ ಶಿಕ್ಷಣ ಸಂಸ್ಥೆಗಳಿಗೆ ಗುರುವಾರ ರಜೆ ಘೋಷಿಸಿದೆ. ಪಾಲ್ಘಾರ್‌ನ ವಾಡಾ ಹಾಗೂ ವಿಕ್ರಮಗಢ ಉಪವಿಭಾಗಗಳಲ್ಲಿ ಕೂಡ ಇದೇ ರೀತಿ ರಜೆ ಘೋಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News