ಹಿಮಾಚಲಪ್ರದೇಶ, ಉತ್ತರಾಖಂಡದಲ್ಲಿ ಭಾರೀ ಮಳೆ 50ಕ್ಕೂ ಅಧಿಕ ಮಂದಿ ಮೃತ್ಯು, ಹಲವರು ನಾಪತ್ತೆ

Update: 2023-08-14 18:34 GMT

Photo : PTI

ಹೊಸದಿಲ್ಲಿ: ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಸೋಮವಾರ ಕೂಡ ಭಾರೀ ಮಳೆ ಮುಂದುವರಿದಿದ್ದು, ಮಳೆ ಸಂಬಂಧಿ ದುರಂತಗಳಲ್ಲಿ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ಭೂಕುಸಿತ ಸಂಭವಿಸಿದೆ. ಹಿಮಾಚಲಪ್ರದೇಶದಲ್ಲಿ ಕಳೆದ ರವಿವಾರದಿಂದ ಭಾರೀ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿ ದುರಂತಗಳಲ್ಲಿ ಕನಿಷ್ಠ 48 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ 19 ಮಂದಿ ಮಂಡಿ ಜಿಲ್ಲೆಯಲ್ಲೇ ಸಾವನ್ನಪ್ಪಿದ್ದಾರೆ. ಸೋಲನ್ ಜಿಲ್ಲೆಯ ಜಾಡ್ಗಾಂವ್ ಗ್ರಾಮದಲ್ಲಿ ರವಿವಾರ ರಾತ್ರಿ ಮೇಘ ಸ್ಫೋಟ ಸಂಭವಿಸಿ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಬಲೇರಾ ಪಂಚಾಯತ್ನಲ್ಲಿ ಭೂಕುಸಿತದಿಂದ ತಾತ್ಕಾಲಿಕ ಗುಡಿಸಲೊಂದು ನೆಲಸಮಗೊಂಡು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ರಾಮ್ಶೆಹರ್ ತಾಲೂಕಿನ ಬನಾಲ್ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಪಂದೋಹ್ನ ಸಂಭಾಲ್ ಸಮೀಪ 6 ಮೃತದೇಹಗಳು ಪತ್ತೆಯಾಗಿವೆ. ಹಲವೆಡೆ ಭೂಕುಸಿತ ಸಂಭವಿಸಿದೆ. ಇದರಿಂದ ಪ್ರಮುಖ ಶಿಮ್ಲಾ-ಚಂಡಿಗಢ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಪ್ರಸಕ್ತ ರಾಜ್ಯದಲ್ಲಿ 752ಕ್ಕೂ ಅಧಿಕ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಭೂಕುಸಿತ ಹಾಗೂ ಮರಗಳು ಬುಡಮೇಲಾಗಿ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿರುವುದರಿಂದ ರಾಜ್ಯದ ರಾಜಧಾನಿಯ ಹಲವು ಭಾಗಗಳಲ್ಲಿ ರವಿವಾರ ರಾತ್ರಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಭಾರತೀಯ ಹವಾಮಾನ ಇಲಾಖೆ ಮಂಗಳವಾರ ರಾಜ್ಯದಲ್ಲಿ ಯೆಲ್ಲೊ ಅಲರ್ಟ್ ಘೋಷಿಸಿದೆ. ಆಗಸ್ಟ್ 18ರ ವರೆಗೆ ಮಳೆ ಸುರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಉತ್ತರಾಖಂಡದಲ್ಲಿಯೂ ಮಳೆ ಅವಾಂತರ:

ಉತ್ತರಾಖಂಡದ ವಿವಿಧೆಡೆ ಸೋಮವಾರ ಕೂಡ ಭಾರೀ ಮಳೆ ಮುಂದುವರಿದಿದ್ದು, ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಐವರು ನಾಪತ್ತೆಯಾಗಿದ್ದಾರೆ. ಡೆಹ್ರಾಡೂನ್ನ ಹೊರವಲಯದಲ್ಲಿರುವ ಖಾಸಗಿ ರಕ್ಷಣಾ ತರಬೇತಿ ಅಕಾಡೆಮಿಯ ಕಟ್ಟಡವೊಂದು ಕುಸಿದಿದೆ. ಕೇದಾರನಾಥ್ ಸಮೀಪದ ಲಿಂಚೋಲಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೇಪಾಳದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ರುದ್ರಪ್ರಯಾಗ ಜಿಲ್ಲೆಯ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವಾರ್ ಹೇಳಿದ್ದಾರೆ. ಋಷಿಕೇಶ್ನ ಶಿವ ಮಂದಿರ ಹಾಗೂ ಮೀರಾನಗರ ಪ್ರದೇಶಗಳಲ್ಲಿ ನೆರೆ ನೀರಿನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಪೌರಿ ಜಿಲ್ಲೆಯ ಲಕ್ಷ್ಮಣ್ಝುಲಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಐವರು ನಾಪತ್ತೆಯಾಗಿದ್ದಾರೆ.

ಧಾರಾಕಾರ ಮಳೆಗೆ ಹೆಚ್ಚಿನ ನದಿಗಳು ಉಕ್ಕಿ ಹರಿಯುತ್ತಿವೆ. ತೆಹ್ರಿ, ಹರಿದ್ವಾರ ಹಾಗೂ ಋಷಿಕೇಶದಲ್ಲಿ ಗಂಗಾ ನದಿ, ಚಮೋಲಿ ಜಿಲ್ಲೆಯ ನಂದಾಗಾರ ಪ್ರದೇಶದಲ್ಲಿ ನಂದಾಕಿನಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಡೆಹ್ರಾಡೂನ್ನ ಸೋಂಗ್ ನದಿ ಸೇತುವೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಋಷಿಕೇಶ್ ಹಾಗೂ ಡೆಹ್ರಾಡೂನ್ನ ಹಲವು ಭಾಗಗಳು ಜಲಾವೃತವಾಗಿವೆ. ನಂದಾಕಿನಿ ನದಿಯಲ್ಲಿ ನೀರು ಏರಿಕೆಯಾಗಿ ಮನೆಗಳಿಗೆ ನುಗ್ಗಿದೆ. ಇದರಿಂದ ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲಾಗಿದೆ. ತೆಹ್ರಿ, ಡೆಹ್ರಾಡೂನ್, ಪುರಿ, ಚಂಪಾವತ್, ನೈನಿತಾಲ್ ಹಾಗೂ ಉಧಮ್ ಸಿಂಗ್ ನಗರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹರಿದ್ವಾರ ಜಿಲ್ಲೆಯಲ್ಲಿ ಆರಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯ ಕುಸಿದು ಕನಿಷ್ಠ 9 ಮಂದಿ ಸಾವು ಶಿಮ್ಲಾ: ಭಾರೀ ಮಳೆಗೆ ಹಿಮಾಚಲಪ್ರದೇಶದ ಶಿಮ್ಲಾದ ಸಮ್ಮರ್ ಹಿಲ್ ಪ್ರದೇಶದಲ್ಲಿರುವ ಶಿವ ದೇವಾಲಯ ಕುಸಿದು 9ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 12ಕ್ಕೂ ಅಧಿಕ ಮಂದಿ ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ. ಪೊಲೀಸರು ಹಾಗೂ ರಾಜ್ಯ ವಿಪತ್ತು ಪ್ರತಿಸ್ಪಂದನಾ ಪಡೆ (ಎಸ್ಡಿಆರ್ಎಫ್) ಶಿವ ದೇವಾಲಯದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾವನ್ ಆಚರಣೆ ಹಿನ್ನೆಲೆಯಲ್ಲಿ ಪ್ರಾರ್ಥಿಸಲು ಭಕ್ತರು ದೇವಾಲಯದಲ್ಲಿ ಸೇರಿದ್ದರು. ದುರ್ಘಟನೆ ನಡೆಯುವ ಸಂದರ್ಭ 25ರಿಂದ 30 ಜನರು ದೇವಾಲಯದಲ್ಲಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಕಾಶಿಯಲ್ಲಿ ಸೇತುವೆ ಕುಸಿತ

ಭಾರೀ ಮಳೆಗೆ ಉತ್ತರಕಾಶಿಯನ್ನು ಚೀನಾ ಗಡಿಯೊಂದಿಗೆ ಸಂಪರ್ಕಿಸುವ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ನ್ಯಾಷನಲ್ ಪಾರ್ಕ್ (ಜಿಎನ್ಪಿ)ನ ನೆಲೋಂಗ್ ಕಣಿವೆ ವಲಯದ ಚೋರ್ಗಡ್ ನದಿಗೆ ಹಾಕಲಾದ ಬೈಲೆ ಸೇತುವೆ ಕುಸಿದಿದೆ. ಹಿಮಾಚಲಪ್ರದೇಶದ ಮೂಲಕ ಉತ್ತರಕಾಶಿ ಹಾಗೂ ಭಾರತ-ಚೀನಾ ಗಡಿಯನ್ನು ಸಂಪರ್ಕಿಸುವ ಹಾಗೂ ದೀರ್ಘ ವ್ಯಾಪ್ತಿಯ ಗಸ್ತಿಗೆ ಬಳಕೆಯಾಗುವ ಈ ಪಾದಾಚಾರಿ ಸೇತುವೆ ಭಾರತೀಯ ಸೇನೆ ಹಾಗೂ ಇಂಡೊ-ಟಿಬೆಟನ್ ಗಡಿ ಪೊಲೀಸ್ಗೆ (ಐಟಿಬಿಪಿ)ಗೆ ಮುಖ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News