ಉತ್ತರ ಭಾರತದಲ್ಲಿ ಮಳೆ ಅಬ್ಬರ: 150 ದಾಟಿದ ಸಾವಿನ ಸಂಖ್ಯೆ

Update: 2023-07-14 02:41 GMT

Photo: PTI

ಹೊಸದಿಲ್ಲಿ: ಉತ್ತರ ಭಾರತದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಮಳೆ ಸಂಬಂಧಿ ಅನಾಹುತಗಳಿಗೆ ಮತ್ತೆ 34 ಮಂದಿ ಬಲಿಯಾಗಿದ್ದು, ಆರು ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 150ನ್ನು ದಾಟಿರುವ ಬಗ್ಗೆ ವರದಿಯಾಗಿದೆ.

ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಚಿಂತಾಜಕವಾಗಿಯೇ ಉಳಿದಿದೆ. ಹಿಮಾಚಲ ಪ್ರದೇಶದ ಲಹೂಲ್ ಸ್ಪಿತಿ ಮತ್ತು ಕಿನ್ನೂರು ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದ 1000 ಮಂದಿ ಪ್ರವಾಸಿಗಳನ್ನು ರಕ್ಷಿಸುವಲ್ಲಿ ಪರಿಹಾರ ತಂಡಗಳು ಯಶಸ್ವಿಯಾಗಿವೆ. ಆಕರ್ಷಕ ಪ್ರವಾಸಿತಾಣ ಚಂದ್ರತಾಲ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 255 ಮಂದಿಯನ್ನೂ ರಕ್ಷಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಗರಿಷ್ಠ ಅಂದರೆ 17 ಮಂದಿ ಸಾವಿಗೀಡಾಗಿದ್ದು, ಹಿಮಾಚಲ ಪ್ರದೇಶದಲ್ಲಿ ಆರು, ಹರ್ಯಾಣದಲ್ಲಿ ಐದು, ಪಂಜಾಬ್ನಲ್ಲಿ ನಾಲ್ಕು ಹಾಗೂ ಉತ್ತರಾಖಂಡದಲ್ಲಿ ಇಬ್ಬರು ಮಳೆ ವಿಕೋಪಕ್ಕೆ ಬಲಿಯಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಿಡಿಲು ಬಡಿದು ಏಳು ಮಂದಿ ಮೃತಪಟ್ಟಿದ್ದರೆ, ಐದು ಮಂದಿ ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮನೆ ಕುಸಿದು ಮೂವರು ಮೃತಪಟ್ಟರೆ, ಇಬ್ಬರು ಮಕ್ಕಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ವ್ಯಾಪಕ ಮಳೆಯಿಂದಾಗಿ ಯಮುನಾ ಹಾಗೂ ಅದರ ಉಪನದಿಗಳು ಸೇರಿದಂತೆ ರಾಜ್ಯದ ಹಲವು ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಬಡೂನ್ನ ಕಾಚ್ಚಲ್ ಸೇತುವೆಯ ಬಳಿ ಗಂಗಾನದಿಯಲ್ಲಿ ತೀವ್ರ ಪ್ರವಾಹ ಸ್ಥಿತಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶಾಮ್ಲಿ ಜಿಲ್ಲೆಯ ಯಮುನಾ ನದಿಯಲ್ಲೂ ಇದೇ ಸ್ಥಿತಿ ಇದೆ.

ಗುರುವಾರ ಆರು ಮಂದಿ ಮಳೆ ಸಂಬಂಧಿ ಅನಾಹುತದಲ್ಲಿ ಜೀವ ಕಳೆದುಕೊಳ್ಳುವ ಮೂಲಕ ಹಿಮಾಚಲ ಪ್ರದೇಶದಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 33ಕ್ಕೆ ಏರಿದೆ. 16 ಮಂದಿ ನಾಪತ್ತೆಯಾಗಿದ್ದಾರೆ. ಪಂಜಾಬ್, ಹರ್ಯಾಣ ಹಾಗೂ ಉತ್ತರಾಖಂಡದಲ್ಲಿ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ ಕ್ರಮವಾಗಿ 15, 16 ಮತ್ತು 17ಕ್ಕೇರಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News