ಗುಜರಾತ್ ನಲ್ಲಿ ಮಳೆ ಅಬ್ಬರ; ಶತಕ ದಾಟಿದ ಸಾವಿನ ಸಂಖ್ಯೆ

Update: 2023-07-24 03:14 GMT

Photo: PTI

ರಾಜಕೋಟ್: ಗುಜರಾತ್ ನಲ್ಲಿ ಮಳೆ ಸಂಬಂಧಿ ದುರಂತಗಳಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ ಮತ್ತೆ 9 ಮಂದಿ ಪ್ರಾಣ ಕಳೆದುಕೊಂಡಿದ್ದು, ಪ್ರಸಕ್ತ ಮುಂಗಾರಿನಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 102ಕ್ಕೆ ಏರಿರುವ ಬಗ್ಗೆ ವರದಿಯಾಗಿದೆ.

ಸೋಮವಾರ ಕೂಡಾ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.ಮುಂದಿನ 24 ಗಂಟೆಗಳಲ್ಲಿ ದೇವಭೂಮಿ ದ್ವಾರಕ, ರಾಜಕೋಟ್, ಭಾವನಗರ ಮತ್ತು ವಲ್ಸಾಡ್ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ಹೇಳಿದೆ.

ಪ್ರವಾಹ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಎರಡು ರಾಷ್ಟ್ರೀಯ ಹೆದ್ದಾರಿಗಳು, 10 ರಾಜ್ಯ ಹೆದ್ದಾರಿಗಳು ಹಾಗೂ 300 ಗ್ರಾಮೀಣ ರಸ್ತೆಗಳು ಪ್ರವಾಹದಿಂದಾಗಿ ಮುಚ್ಚಿವೆ. ಕೆಲವು ಕಡೆಗಳಲ್ಲಿ ಮಾತ್ರ ಸಂಚಾರ ಪುನರಾರಂಭವಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ರಾಜಕೋಟ್ ಪ್ರದೇಶದ ಮೂರು ಪ್ರಮುಖ ಅಣೆಕಟ್ಟುಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಹಲವು ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ. ಅಜಿ-1 ಮತ್ತು ನ್ಯಾರಿ-1 ಅಣೆಕಟ್ಟುಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದರೆ, ಭದರ್-1 ಅಣೆಕಟ್ಟಿನ 29 ಕಾಲುವೆಗಳ ಪೈಕಿ 8ನ್ನು ತೆರೆಯಲಾಗಿದೆ. ಭಾನುವಾರ ನೀರಿನಮಟ್ಟ ಗರಿಷ್ಠ ಪ್ರಮಾಣ ತಲುಪಿದೆ. ಅಜಿ ನದಿಯ ಕೆಳಭಾಗದ 22 ಗ್ರಾಮಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

ಜುನಾಗಢ ಜಿಲ್ಲೆಯಲ್ಲೂ ಗಂಭೀರ ಮಳೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಜುನಾಗಢ ಪಟ್ಟಣದಲ್ಲಿ 241 ಮಿಲಿಮೀಟರ್ ಮಳೆ ಬಿದ್ದಿರುವ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಪ್ರದೇಶದ3000ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಈ ಪ್ರದೇಶದಲ್ಲಿ ಪರಿಸ್ಥಿತಿ ಸಹಜತೆಗೆ ಮರಳುತ್ತಿರುವ ಹಿನ್ನೆಲೆಯಲ್ಲಿ, ಕೆಸರುಮಯವಾದ ರಸ್ತೆ ಹಾಗೂ ಬೀದಿಗಳನ್ನು ಸರಿಪಡಿಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News