ಮನೆ ಉಳಿತಾಯದ ಪ್ರಮಾಣ ಐದು ದಶಕಗಳಲ್ಲೇ ಅತ್ಯಂತ ಕನಿಷ್ಠ
ಹೊಸದಿಲ್ಲಿ: 2022ನೇ ಆರ್ಥಿಕ ವರ್ಷದ ಜಿಡಿಪಿಯ ನಿವ್ವಳ ಹಣಕಾಸು ಉಳಿತಾಯವಾದ ಶೇ. 7.2ಕ್ಕೆ ಹೋಲಿಸಿದರೆ, 2023ನೇ ಆರ್ಥಿಕ ವರ್ಷದಲ್ಲಿ ಶೇ. 5.1ಕ್ಕೆ ಕುಸಿತ ಕಂಡಿದ್ದು, ಇದು ಕಳೆದ ಐದು ದಶಕಗಳಲ್ಲೇ ಅತ್ಯಂತ ಕನಿಷ್ಠವೆಂದು ಸೋಮವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಈ ಅಂಕಿ-ಸಂಖ್ಯೆಯು ಸಾಮಾನ್ಯರ ಆದಾಯದಲ್ಲಿ ಗಂಭೀರ ಪ್ರಮಾಣದ ಇಳಿಕೆ ಆಗಿರುವುದನ್ನು ಸೂಚಿಸುತ್ತಿದ್ದು, ಸಾಂಕ್ರಾಮಿಕೋತ್ತರ ಅವಧಿಯಲ್ಲಿನ ಬಳಕೆ ಪ್ರಮಾಣದಲ್ಲಿ ಏರಿಕೆಯಾಗಿರುವುದೂ ಕೂಡಾ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ ಎಂದು financialexpress.com ವರದಿ ಮಾಡಿದೆ.
ಆತಂಕಕಾರಿ ಸಂಗತಿಯೆಂದರೆ, 2022ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಜಿಡಿಪಿಯ ಶೇ. 3.8ರಷ್ಟಿದ್ದ ಆರ್ಥಿಕ ಹೊಣೆಗಾರಿಕೆಯ ಪ್ರಮಾಣವು ತೀವ್ರ ಏರಿಕೆ ಕಂಡು, 2023ನೇ ಆರ್ಥಿಕ ವರ್ಷದಲ್ಲಿ ಶೇ. 5.8ಕ್ಕೆ ತಲುಪಿದೆ. ಇದು ದೈನಂದಿನ ಬಳಕೆ ಹಾಗೂ ವಸತಿ ಖರೀದಿಯ ಕಾರಣಕ್ಕಾಗಿ ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದ ಸಾಲ ಶೂಲಕ್ಕೆ ಈಡಾಗಿರುವುದನ್ನು ಸೂಚಿಸುತ್ತಿದೆ.
ಕಳೆದ ವರ್ಷ ಏರಿಕೆಯಾಗಿರುವ ಹಣಕಾಸು ಹೊಣೆಗಾರಿಕೆಯು ಸ್ವಾತಂತ್ರ್ಯ ಬಂದಾಗಿನಿಂದ ಅತ್ಯಂತ ಗರಿಷ್ಠ ಪ್ರಮಾಣದ್ದಾಗಿದೆ. 2007ರ ಆರ್ಥಿಕ ವರ್ಷದಲ್ಲಿ ಮಾತ್ರ ಈ ಪ್ರಮಾಣವು ಶೇ. 6.7ರಷ್ಟಿತ್ತು.
2021ನೇ ಆರ್ಥಿಕ ವರ್ಷದಲ್ಲಿ ರೂ. 22.8 ಟ್ರಿಲಿಯನ್ ನಷ್ಟಿದ್ದ ನಿವ್ವಳ ಮನೆಬಳಕೆ ಸ್ವತ್ತಿನ ಪ್ರಮಾಣವು ಸಾಂಕ್ರಾಮಿಕ ವರ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಇಳಿಕೆ ಕಂಡು, 2022ನೇ ಆರ್ಥಿಕ ವರ್ಷದಲ್ಲಿ ರೂ. 16.96 ಟ್ರಿಲಿಯನ್ ತಲುಪಿತ್ತು. ಇದಾದ ನಂತರ ಮತ್ತೆ 2023ನೇ ಆರ್ಥಿಕ ವರ್ಷದಲ್ಲಿ ರೂ. 13.76 ಟ್ರಿಲಿಯನ್ ಗೆ ಕುಸಿದಿತ್ತು. ಆದರೆ, ಹಣಕಾಸು ಹೊಣೆಗಾರಿಕೆಯಂಥ ಮನೆಬಳಕೆ ಸಾಲವು ಇದೇ ಸಮಯದಲ್ಲಿ 2023ರ ಆರ್ಥಿಕ ವರ್ಷದ ಜಿಡಿಪಿಯ ಪೈಕಿ ಶೇ. 37.6ಕ್ಕೆ ಏರಿಕೆಯಾಗಿತ್ತು. ಈ ಪ್ರಮಾಣವು 2022ನೇ ಆರ್ಥಿಕ ವರ್ಷದಲ್ಲಿ ಶೇ. 36.9ರಷ್ಟಿತ್ತು.
ಹಣದುಬ್ಬರ ಏರುಗತಿಯಲ್ಲಿರುವ ಸಮಯದಲ್ಲಿ ಮನೆಬಳಕೆ ಹಾಗೂ ಸಣ್ಣ ಮತ್ತು ಕಿರು ಉದ್ಯಮಗಳ ಆದಾಯ ಕುಸಿತಗೊಂಡಿರುವುದು ಅಥವಾ ಏಕಪ್ರ ಕಾರವಾಗಿರುವುದು ಬಹುಶಃ ಮನೆಬಳಕೆ ಉಳಿತಾಯದಲ್ಲಿ ಇಳಿಕೆಯಾಗಿ, ಹೆಚ್ಚು ಸಾಲ ಪಡೆಯುವಂತಾಗಲು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.